ಲಾಲು ಪ್ರಸಾದ್, ತೇಜಸ್ವಿಗೆ ಸಿಬಿಐ ಸಮನ್ಸ್
Update: 2017-09-26 23:30 IST
ಹೊಸದಿಲ್ಲಿ, ಸೆ. 26: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಹಾಗೂ ಅವರ ಪುತ್ರ ತೇಜಸ್ವಿ ಅವರಿಗೆ ಅನುಕ್ರಮವಾಗಿ ಅಕ್ಟೋಬರ್ 3 ಹಾಗೂ 4ರಂದು ಹಾಜರಾಗುವಂತೆ ಸಿಬಿಐ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ಲಾಲು ಪ್ರಸಾದ್ ಯಾದವ್ 2006ರಲ್ಲಿ ಕೇಂದ್ರ ಸಚಿವರಾಗಿದ್ದಾಗ ಎರಡು ರೈಲ್ವೇ ಹೊಟೇಲ್‌ಗಳನ್ನು ನಿರ್ವಹಿಸಲು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲು ಲಂಚ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ತಂಡದ ಮುಂದೆ ಹಾಜರಾಗಲು 15 ದಿನಗಳ ಕಾಲಾವಕಾಶ ನೀಡುವಂತೆ ಕೋರಿ ಈ ಇಬ್ಬರು ರಾಜಕಾರಣಿಗಳು ಸಲ್ಲಿಸಿದ್ದ ಮನವಿಯನ್ನು ಸಿಬಿಐ ತಿರಸ್ಕರಿಸಿದೆ.
ತೇಜಸ್ವಿಗೆ ಮಂಗಳವಾರ ಹಾಜರಾಗಲು ಸಮನ್ಸ್ ಕಳುಹಿಸಲಾಗಿತ್ತು. ಆದರೆ, ತೇಜಸ್ವಿ ತನ್ನ ಪರ ವಕೀಲರನ್ನು ಕಳುಹಿಸಿ ಇನ್ನಷ್ಟು ಸಮಯಾವಕಾಶ ಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 3ರಂದು ಲಾಲು ಪ್ರಸಾದ್ ಯಾದವ್ ಹಾಗೂ ಅಕ್ಟೋಬರ್ 4ರಂದು ತೇಜಸ್ವಿ ಹಾಜರಾಗುವಂತೆ ಸಿಬಿಐ ಸಮನ್ಸ್ ಕಳುಹಿಸಿದೆ.