3 ವರ್ಷದ ಬಾಲಕಿ ಕಠ್ಮಂಡುವಿನ ನೂತನ ಕುಮಾರಿ
ಕಠ್ಮಂಡು (ನೇಪಾಳ), ಸೆ. 27: ಮೂರು ವರ್ಷದ ಹೆಣ್ಣು ಮಗುವೊಂದನ್ನು ನೇಪಾಳದ ರಾಜಧಾನಿ ಕಠ್ಮಂಡುವಿನ ನೂತನ ‘ಕುಮಾರಿ’ಯಾಗಿ ನೇಮಿಸಲಾಗಿದೆ ಹಾಗೂ ಇದರೊಂದಿಗೆ ‘ಜೀವಂತ ದೇವಿ’ಯರನ್ನು ಆರಾಧಿಸುವ ಪ್ರಾಚೀನ ಪರಂಪರೆಯೊಂದನ್ನು ಮುಂದುವರಿಸಲಾಗಿದೆ.
ಈ ಹಿಂದಿನ ಕುಮಾರಿ ಪ್ರೌಢಾವಸ್ಥೆಗೆ ಬಂದ ಹಿನ್ನೆಲೆಯಲ್ಲಿ ನಿವೃತ್ತಿಯಾದ ನಂತರ ನೂತನ ಕುಮಾರಿಯನ್ನು ಆರಿಸಲಾಗಿದೆ.
ತೃಷ್ಣಾ ಶಾಕ್ಯ ಗುರುವಾರ ನಡೆಯುವ ಸಮಾರಂಭವೊಂದರಲ್ಲಿ ನೂತನ ಕುಮಾರಿಯ ಪದವಿಯನ್ನು ಪಡೆಯುತ್ತಾರೆ. ಬಾಲಕಿಯನ್ನು ಆಕೆಯ ಕುಟುಂಬದ ಮನೆಯಿಂದ ಕಠ್ಮಂಡುವಿನ ಪ್ರಾಚೀನ ದರ್ಬಾರ್ ಚೌಕದಲ್ಲಿರುವ ಅರಮನೆಗೆ ಕರೆದೊಯ್ಯಲಾಗುವುದು. ಬಾಲಕಿಯು ಪ್ರೌಢಾವಸ್ಥೆಗೆ ಬರುವವರೆಗೆ ಅಲ್ಲಿಯೇ ವಾಸಿಸುತ್ತಾಳೆ. ಅಲ್ಲಿ ಬಾಲಕಿಯ ಆರೈಕೆಯನ್ನು ವಿಶೇಷವಾಗಿ ನೇಮಕಗೊಂಡ ಸಿಬ್ಬಂದಿ ಮಾಡುತ್ತಾರೆ.
ನಾಲ್ಕು ಅಭ್ಯರ್ಥಿಗಳಿಂದ ತೃಷ್ಣಾಳನ್ನು ಆಯ್ಕೆ ಮಾಡಲಾಗಿದೆ ಎಂದು ಕುಮಾರಿಯ ಸೇವೆಗೈಯಲಿರುವ ಅರ್ಚಕ ಉದ್ಧವ್ ಮನ್ ಕರ್ಮಾಚಾರ್ಯ ಹೇಳಿದರು.
ವರ್ಷದಲ್ಲಿ 13 ಬಾರಿ ಮೆರವಣಿಗೆ
ಕಠ್ಮಂಡು ಕಣಿವೆಯಲ್ಲಿ ವಾಸಿಸುವ ನೇವಾರ್ ಸಮುದಾಯದಿಂದ ‘ಕುಮಾರಿ’ಯರನ್ನು ಆರಿಸಲಾಗುತ್ತದೆ. ವಿಶೇಷ ಹಬ್ಬದ ದಿನಗಳಲ್ಲಿ ವರ್ಷದಲ್ಲಿ 13 ಬಾರಿ ಮಾತ್ರ ಅರಮನೆಯಿಂದ ಅವರು ಹೊರಗೆ ಹೋಗುತ್ತಾರೆ.
ಆ ಸಂದರ್ಭಗಳಲ್ಲಿ ಅವರನ್ನು ವಿಶೇಷವಾಗಿ ಸಿಂಗರಿಸಿ ಕಠ್ಮಂಡುವಿನ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಅವರ ಕಾಲು ನೆಲಕ್ಕೆ ತಾಗದಂತೆ ಅವರನ್ನು ಜನರು ಎತ್ತಿಕೊಂಡು ಹೋಗುತ್ತಾರೆ.
ಈ ಪದ್ಧತಿಯು ಮಕ್ಕಳ ಹಕ್ಕುಗಳ ಕಾರ್ಯಕರ್ತರಿಂದ ಟೀಕೆಗೆ ಒಳಗಾಗಿದೆ. ಕುಮಾರಿಯರಿಗೆ ಬಾಲ್ಯವನ್ನು ನಿರಾಕರಿಸಲಾಗುತ್ತದೆ ಹಾಗೂ ಅವರನ್ನು ಸಮಾಜದಿಂದ ಹೊರಗೆ ಇಡುವ ಮೂಲಕ ಶಿಕ್ಷಣ ಮತ್ತು ಬೆಳವಣಿಗೆಯಿಂದ ವಂಚಿತಗೊಳಿಸಲಾಗುತ್ತದೆ ಎಂದು ಅವರು ಆರೋಪಿಸುತ್ತಾರೆ.