ಆರ್ಥಿಕತೆಯನ್ನು ತಪ್ಪು ದಿಕ್ಕಿನಲ್ಲಿ ಕೊಂಡೊಯ್ಯುತ್ತಿರುವ ಕೇಂದ್ರ ಸರಕಾರ
ಹೊಸದಿಲ್ಲಿ, ಸೆ. 26: ಆರ್ಥಿಕತೆಯನ್ನು ಕೇಂದ್ರ ಸರಕಾರವು ತಪ್ಪು ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ. ಆರ್ಥಿಕತೆ ನಿಧಾನವಾಗಲು ಸರಕಾರದ ದೋಷಪೂರಿತ ಸಲಹೆಗಾರರು ಹಾಗೂ ತಪ್ಪು ನಿರ್ದೇಶನಗಳ ಸುಧಾರಣೆಗಳು ಪ್ರಮುಖ ಕಾರಣ ಎಂದು ಆರೆಸ್ಸೆಸ್ ನ ಅಂಗ ಸಂಸ್ಥೆಯಾಗಿರುವ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಬುಧವಾರ ಹೇಳಿದೆ ಹಾಗೂ ಕಾರ್ಮಿಕರು ಹೆಚ್ಚಾಗಿರುವ ವಲಯದಲ್ಲಿ ಉತ್ತೇಜಕ ಪ್ಯಾಕ್‌ಗಳನ್ನು ಘೋಷಿಸುವಂತೆ ಆಗ್ರಹಿಸಿದೆ.
ಸಮರ್ಪಕ ತಜ್ಞರ ಕೊರತೆ, ಸಾಮಾಜಿಕ ವಲಯ (ಶ್ರಮಿಕರು, ರೈತರು, ಬಡತನ ರೇಖೆಗಿಂತ ಕೆಳಗಿರುವವರು, ಬುಡಕಟ್ಟುಗಳು, ಹಿಂದುಳಿದ ಜನರು, ಸಣ್ಣ ಕೈಗಾರಿಕೆಗಳು)ದ ಸಂವಹನ ಹಾಗೂ ಫೀಡ್ ಬ್ಯಾಕ್‌ನ ಕೊರತೆ , ದೋಷಪೂರಿತ ಸಲಹೆಗಾರರು ಹಾಗೂ ತಪ್ಪು ನಿರ್ದೇಶನದ ಸುಧಾರಣೆಗಳು ಪ್ರಧಾನಿ ಮೋದಿ ಅವರ ಉತ್ತಮ ಉದ್ದೇಶ ಹಾಗೂ ಶ್ರಮವನ್ನು ವ್ಯರ್ಥ ಮಾಡಿದೆ ಎಂದು ಬಿಎಂಎಸ್‌ನ ಪ್ರಧಾನ ಕಾರ್ಯದರ್ಶಿ ವೃಜೇಶ್ ಉಪಾಧ್ಯಾಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹಿಂದಿನ ಯುಪಿಎ ಸರಕಾರದ ಉದ್ಯೋಗ ಸ್ಥಳಾಂತರ ಸುಧಾರಣೆಯನ್ನು ಕೂಡ ಬಿಎಂಎಸ್ ತರಾಟೆಗೆ ತೆಗೆದುಕೊಂಡಿದೆ.
ಆರ್ಥಿಕತೆಯ ನಿಧಾನ ಗತಿ ನಿಭಾಯಿಸಲು ಕಠಿಣ ಮಧ್ಯಪ್ರವೇಶ ಆಗ್ರಹಿಸಿದ ಬಿಎಂಎಸ್‌ನ ರಾಷ್ಟ್ರೀಯ ಅಧ್ಯಕ್ಷ ಸಾಜಿ ನಾರಾಯಣನ್, ಕಾರ್ಮಿಕರ ಹೆಚ್ಚಾಗಿರುವ ವಲಯದಲ್ಲಿ ಉತ್ತೇಜಕ ಪ್ಯಾಕೇಜ್‌ಗಳನ್ನು ಘೋಷಿಸಬೇಕು ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಈಗಿರುವ 100ರಿಂದ 200 ದಿನಗಳ ಕೆಲಸ ಹೆಚ್ಚಿಸಬೇಕು ಎಂದರು.
ಪ್ರಸಕ್ತ ಸುಧಾರಣಾ ಪ್ರಕ್ರಿಯೆ ಹಿಂದೆ ತೆಗೆದುಕೊಳ್ಳಿ ಎಂದು ಬಿಎಂಎಸ್ ಆಗ್ರಹಿಸಿತು ಹಾಗೂ ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ದುಂಡು ಮೇಜಿನ ಸಭೆ ನಡೆಸುವಂತೆ ತಿಳಿಸಿತು.
ಕೇಂದ್ರ ಸರಕಾರದ ಕಾರ್ಮಿಕ ಕಾನೂನು ಸುಧಾರಣೆ ಪ್ರಸ್ತಾಪ, ಹಳಬರಿಗೆ ಕೊಕ್, ಹೊಸಬರ ನೇಮಕ, ಕೂಲಿಯ ವೆಚ್ಚ ಕಡಿತ, ಶ್ರಮಿಕರ ಸ್ಥಳಾಂತರ ತಂತ್ರಜ್ಞಾನ, ಹೂಡಿಕೆ ಹಿಂದೆಗೆತ, ನೇಮಕಾತಿ ನಿಷೇಧ, ಹುದ್ದೆ, ಸಿಬ್ಬಂದಿ ರದ್ದು, ಅಟೋಮೇಶನ್ ಮೊದಲಾದುವನ್ನು ಪ್ರಸ್ತಾಪಿಸಿದೆ. ಹೂಡಿಕೆ ಹಿಂದೆಗೆತ ಈಗಾಗಲೇ ಸಣ್ಣ ಹಾಗೂ ಅತಿ ಸಣ್ಣ ವಲಯಗಳು ಹಾಗೂ ಚಿಲ್ಲರೆ ವ್ಯಾಪಾರದ ವಲಯದ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ ಎಂದು ಬಿಎಂಎಸ್ ಹೇಳಿದೆ.