ರವೀಶ್ ಕುಮಾರ್ ಗೆ ವಾಟ್ಸ್ಆ್ಯಪ್ ನಲ್ಲಿ ಕಿರುಕುಳ ನೀಡುತ್ತಿದ್ದವರ ಮೂಲ ಹುಡುಕಿದಾಗ ಹೊರಬಿತ್ತು ಆಘಾತಕಾರಿ ಮಾಹಿತಿ !

Update: 2017-09-27 17:58 GMT

ಹೊಸದಿಲ್ಲಿ, ಸೆ. 27 : ಎನ್ ಡಿ ಟಿ ವಿ ಇಂಡಿಯಾದ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರನ್ನು ವಾಟ್ಸ್ಆ್ಯಪ್ ಗ್ರೂಪ್ ಒಂದಕ್ಕೆ ಬಲವಂತವಾಗಿ ಸೇರಿಸಿ ಅವಹೇಳನ ಮಾಡುತ್ತಿದ್ದ  ಮೊಬೈಲ್ ಸಂಖ್ಯೆಗಳ ಕುರಿತ ತನಿಖೆಯಿಂದ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. 

“ऊँ धर्म रक्षति रक्षित:” ( ಓಂ ಧರ್ಮ್ ರಕ್ಷತಿ ರಕ್ಷಿತ್ ) ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ ಒಂದಕ್ಕೆ ರವೀಶ್ ಕುಮಾರ್ ಅವರನ್ನು ಸೇರಿಸಿ ಅವರ ಮೇಲೆ ಬೈಗುಳಗಳ ಸುರಿಮಳೆಯನ್ನೇ ಸುಶಿಸಲಾಗುತ್ತಿತ್ತು. ಬೆದರಿಕೆ ಮಾದರಿಯ ಅವಹೇಳನ ನಡೆಸಲಾಗುತ್ತಿತ್ತು. 

ರವೀಶ್ ಆ ಗ್ರೂಪ್ ನಿಂದ ಹೊರ ಬಂದರೂ ಮತ್ತೆ ಮತ್ತೆ ಅವರನ್ನು ಆ ಗ್ರೂಪ್ ಗೆ ಸೇರಿಸಿ ಇದನ್ನು ಮುಂದುವರಿಸಲಾಗುತ್ತಿತ್ತು. ಈ ಅವಹೇಳನಗಳ ಸ್ಕ್ರೀನ್ ಶಾಟ್ ಗಳನ್ನು ರವೀಶ್ ಕುಮಾರ್ ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದರು.

ಈ ಬಗ್ಗೆ altnews.in ತನಿಖೆ ನಡೆಸಿತು. ರವೀಶ್ ಕುಮಾರ್ ಹಾಕಿದ್ದ ಸ್ಕ್ರೀನ್ ಶಾಟ್ ನಲ್ಲಿದ್ದ ಒಂದು ಮೊಬೈಲ್ ನಂಬರ್ “7575826300” ನಿಂದ  “मुझे भी दुःख है तू जीवित है ( ನೀನು ಜೀವಂತ ಇರುವುದೇ ನನಗೆ ದುಃಖ ತಂದಿದೆ ) ಎಂದಿತ್ತು. ಆ ನಂಬರ್ ಅನ್ನು ಇಂಟರ್ನೆಟ್ ನಲ್ಲಿ ಹುಡುಕಿದಾಗ Anjaney Exports ಎಂಬ ಕಂಪೆನಿ ಇದೇ ನಂಬರನ್ನು ಹಲವು ಬಾರಿ ತನ್ನ ಕಂಪೆನಿಯ ಜಾಹೀರಾತಿನ ಜೊತೆ ಟ್ವೀಟ್ ಮಾಡಿದ್ದು ಕಂಡು ಬಂತು. 

Indiamart.com ನಲ್ಲಿ   Anjaney Exports ಬಗ್ಗೆ ಮಾಹಿತಿ ಹುಡುಕಿದಾಗ ಇದರ ವ್ಯವಸ್ಥಾಪಕ ಪಾಲುದಾರ ನೀರಜ್ ದವೆ ಎಂದು ತಿಳಿದು ಬಂತು. Indiamart.com ನಲ್ಲಿ ಕಂಪೆನಿಯ ಖಾತೆ ನಿರ್ವಹಿಸುವವರೇ ಮಾಹಿತಿ ಹಾಕಬೇಕಾದ್ದರಿಂದ ಈ ಮೊಬೈಲ್ ನಂಬರನ್ನು  ನೀರಜ್ ದವೆಯೇ ಅಲ್ಲಿ ನಮೂದಿಸಿರಬೇಕು ಎಂದು ಖಚಿತವಾಯಿತು.

Indiamart.com ನಲ್ಲಿ Anjaney Exports ಗೆ ಇನ್ನೊಂದು ಮೊಬೈಲ್ ನಂಬರ್ ಕೂಡ ಇತ್ತು. ಅದು ಈಗಾಗಲೇ ಬಹಿರಂಗವಾಗದೆ ಇದ್ದುದರಿಂದ altnews.in  ಅದನ್ನು ಬಹಿರಂಗಪಡಿಸಿಲ್ಲ. ಆ ನಂಬರನ್ನು ಮೊಬೈಲ್ ನಂಬರ್ ಗಳ ಮಾಹಿತಿ ನೀಡುವ  ಟ್ರು ಕಾಲರ್ ನಲ್ಲಿ ಹುಡುಕಿದಾಗ ಆ ವ್ಯಕ್ತಿಯ ಟ್ವಿಟರ್ ಹ್ಯಾಂಡಲ್  “Nir_27” ಎಂದು ತೋರಿಸಿತು. ಇದು ಬ್ಲೂ ಟಿಕ್ ( ನೀಲಿ ಗುರುತು) ಆಗಿರುವುದರಿಂದ ದೃಢೀಕೃತ ಮಾಹಿತಿ ಎಂಬುದು ಖಚಿತ. 

Indiamart.com ನಲ್ಲಿ   Anjaney Exports ಬಗ್ಗೆ ಮಾಹಿತಿ ಹುಡುಕಿದಾಗ ಇದರ ವ್ಯವಸ್ಥಾಪಕ ಪಾಲುದಾರ ನೀರಜ್ ದವೆ ಎಂದು ತಿಳಿದು ಬಂತು. Indiamart.com ನಲ್ಲಿ  Anjaney Exports ಖಾತೆ ನಿರ್ವಹಿಸುವ ನೀರಜ್ ದವೆ ಹಾಗು “Nir_27”  ಟ್ವಿಟರ್ ಖಾತೆ ಹೊಂದಿರುವ ನೀರಜ್ ದವೆ ಒಂದೇ ಎಂಬುದು ಟ್ವೀಟ್ ಒಂದರಿಂದ ಖಚಿತವಾಯಿತು. 

“Nir_27” ಟ್ವಿಟರ್ ಖಾತೆಯನ್ನು ಪರಿಶೀಲಿಸಿದಾಗ ಆಘಾತ ಕಾಡಿತ್ತು. ಈ ಖಾತೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಫಾಲೋ ಮಾಡುತ್ತಿದ್ದಾರೆ !. ಈ ನೀರಜ್ ದವೆ ಸುಬ್ರಮಣ್ಯನ್ ಸ್ವಾಮೀ ಯಂತಹ ಬಿಜೆಪಿ ನಾಯಕರ ಜೊತೆಗೂ ಸಂಪರ್ಕದಲ್ಲಿರುವುದನ್ನು ದೃಢಪಡಿಸುವ ಟ್ವೀಟ್ ಗಳು ಅಲ್ಲಿದ್ದವು.

ರವೀಶ್ ಕುಮಾರ್ ರನ್ನು ಅವಹೇಳನ ಮಾಡಿದ ವಾಟ್ಸ್ಆ್ಯಪ್ ಗ್ರೂಪಿನ ಅಡ್ಮಿನ್ ಗಳಲ್ಲಿ ಒಬ್ಬರಾದ ಆಕಾಶ್ ಸೋನಿ ಯವರ ವಿವರ ಹುಡುಕಿದಾಗ ಈ ವ್ಯಕ್ತಿ ತನ್ನ ಪ್ರೊಫೈಲ್ ಪಿಕ್ಚರ್ ನಲ್ಲೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಗಿರುವ ಚಿತ್ರ ಹಾಕಿಕೊಂಡಿದ್ದಾನೆ.

ಇತರ ಹಲವು ಬಿಜೆಪಿ ನಾಯಕರ ಜೊತೆಗೂ ಇರುವ ಫೋಟೋಗಳು ಈತನ ಫೇಸ್ ಬುಕ್ ಖಾತೆಯಲ್ಲಿವೆ. ಈ ವ್ಯಕ್ತಿ ಬರ್ಖಾ ದತ್ , ರಾಜದೀಪ್ ಸರ್ದೇಸಾಯಿ, ಅಭಿಸಾರ್ ಶರ್ಮ ಅವರ ಮೊಬೈಲ್ ನಂಬರನ್ನು ಬಹಿರಂಗಪಡಿಸಿದ್ದ. 

ಇದೇ ವಾಟ್ಸ್ಆ್ಯಪ್ ಗ್ರೂಪಿನಲ್ಲಿ  ನಿಖಿಲ್ ದಂಡಿಚ್ ಎಂಬ ಇನ್ನೊಬ್ಬನಿದ್ದಾನೆ. ಈತ “A bitch died a dog’s death” ಎಂದು ಗೌರಿ ಲಂಕೇಶ್ ಕೊಲೆ ಕುರಿತು ಸಂಭ್ರಮ ವ್ಯಕ್ತಪಡಿಸಿದ್ದ. ಈತನನ್ನೂ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ  ಫಾಲೋ ಮಾಡುತ್ತಿದ್ದಾರೆ. 

 ಇತ್ತೀಚಿಗೆ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯ ತಿರುಚಿದ ವೀಡಿಯೊ ಒಂದನ್ನು ಹಾಕಿ ರವೀಶ್ ಕುಮಾರ್ ರ ಹೆಸರು ಕೆಡಿಸಲು ಪ್ರಾರಂಭಿಸಿದ್ದನ್ನು Alt News ಬಯಲಿಗೆಳಿದಿತ್ತು. ಇದಕ್ಕೂ ಮೊದಲು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಯಾವುದೊ ಮಹಿಳೆಯ ಫೋಟೋ ಹಾಕಿ ಆಕೆ ರವೀಶ್ ಕುಮಾರ್ ರ ಸೋದರಿ ಎಂದು ಸುಳ್ಳು ಹರಡಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News