ಜೀವವೈವಿಧ್ಯತೆಯ ದಾಖಲೀಕರಣ ಮಹತ್ವದ ಕಾರ್ಯ: ಹರೀಶ್ ಭಟ್

Update: 2017-09-28 14:46 GMT

ಮೂಡುಬಿದಿರೆ, ಸೆ. 28: ನಮ್ಮ ಭೂಮಿಯು ಅಗಾಧವಾದ ಜೀವವೈವಿಧ್ಯತೆಯನ್ನು ಹೊಂದಿದೆ. ಈ ವೈವಿಧ್ಯತೆಯನ್ನು ರಕ್ಷಿಸುವ, ಪೋಷಿಸುವ ಕೆಲಸ ನಮ್ಮಿಂದಾಗಬೇಕಿದೆ. ಜೀವಸಂಕುಲವನ್ನು ರಕ್ಷಿಸುವ ಮೊದಲು ಅದರ ಅನನ್ಯತೆಯ ಬಗ್ಗೆ ತಿಳಿದುಕೊಳ್ಳುವ, ಅದನ್ನು ಅಭ್ಯಸಿಸುವ ಕೆಲಸವಾಗಬೇಕು. ಇದು ಜೀವವೈವಿಧ್ಯತೆಯ ದಾಖಲೀಕರಣದಿಂದ ಮಾತ್ರ ಸಾಧ್ಯ. ಜೀವಶಾಸ್ತ್ರದಲ್ಲಿ ಜೀವವೈವಿಧ್ಯತೆಯ ದಾಖಲೀಕರಣಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಸಂಶೋಧಕ ಹರೀಶ್ ಭಟ್ ಹೇಳಿದರು.

ಆಳ್ವಾಸ್ ಸ್ನಾತಕೋತ್ತರ ಹಾಗೂ ಸಂಶೋಧನ ಕೇಂದ್ರದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ `ಜೀವವೈವಿಧ್ಯತೆಯ ದಾಖಲೀಕರಣ' ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಭೂಮಿಯ ಮೇಲೆ 80 ರಿಂದ 120 ಲಕ್ಷದಷ್ಟು ವೈವಿಧ್ಯಮಯ ಪ್ರಭೇದಗಳಿರುವುದಾಗಿ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಆದರೆ ಇಲ್ಲಿಯವರೆಗೂ ಕೇವಲ 16 ಲಕ್ಷ ಪ್ರಭೇದಗಳನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ. ನಮ್ಮ ಜೀವ ವೈವಿಧ್ಯತೆ ಎಷ್ಟು ವಿಫುಲವಾಗಿದೆ ಎಂಬುದಕ್ಕೆ ಇದು ಉತ್ತಮ ನಿದರ್ಶನ. ಭವಿಷ್ಯದಲ್ಲಿ ಖಂಡಿತವಾಗಿಯೂ ಜೀವವೈವಿಧ್ಯತೆಯ ದಾಖಲೀಕರಣಕ್ಕಿರುವ ಮಹತ್ವ ಹೆಚ್ಚಲಿದೆ. ಇದರ ಬಗ್ಗೆ ತೀವ್ರಗತಿಯಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಅಂತಹ ಸಂಶೋಧನ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಮುಖ್ಯ ಪಾತ್ರ ವಹಿಸುವಂತಾಗಬೇಕು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, 'ಸ್ನಾತಕೋತ್ತರ ಪದವಿಯ ವಿಷಯಗಳು ಅಗಾಧವಾದ ಜ್ಞಾನವನ್ನು ನೀಡುವಂತಹವುಗಳು. ಅದರ ಅನ್ವಯ ಸರಿಯಾದ ರೀತಿಯಲ್ಲಿ ಆಗಬೇಕು. ಅದಕ್ಕಾಗಿ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು. ನಮ್ಮ ಓದು, ಅಧ್ಯಯನ ಯಾವಾಗಲೂ ಹೆಚ್ಚಿನ ಜ್ಞಾನವನ್ನು ನೀಡುತ್ತದೆ. ವಿದ್ಯಾರ್ಥಿಗಳ ಅಧ್ಯಯನ, ಸಂಶೋಧನಾ ಕಾರ್ಯಗಳಿಗೆ ನಮ್ಮ ಸಂಸ್ಥೆ ಯಾವಾಗಲೂ ಸಹಕಾರ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಇಂದು ನಮ್ಮ ಸಂಶೋಧನೆ, ಅಭಿವೃದ್ಧಿ ಕಾರ್ಯಗಳೆಲ್ಲವೂ ಮಾನವ ಕೇಂದ್ರಿತವಾಗಿದೆ. ಸಂಶೋಧನಾ ಕಾರ್ಯಗಳು ಹೆಚ್ಚು ವಿಸ್ತಾರಗೊಳ್ಳಬೇಕಿದೆ. `ಮಾನವ' ಕೇಂದ್ರಿತ ಜೀವನದಿಂದ `ಜೀವ' ಕೇಂದ್ರಿತ ಸಂಶೋಧನೆಗಳು, ಬದುಕಿನ ಬಗ್ಗೆ ಯೋಚಿಸುವುದು ನಮ್ಮ ಇಂದಿನ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಜೀವ ವೈವಿಧ್ಯತೆ ದಾಖಲೀಕರಣದಂತಹ ಕೆಲಸಗಳು ಹೆಚ್ಚು ಮಹತ್ವದ್ದೆನಿಸುತ್ತವೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಇದರ ಬಗ್ಗೆ ಗಮನ ಹರಿಸಲಿದ್ದು, ವಿದ್ಯಾರ್ಥಿಗಳು ಜೀವ ವೈವಿಧ್ಯತೆ ದಾಖಲೀಕರಣ ಹಾಗೂ ಅಧ್ಯಯನ ಮಾಡುವಂತೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರಶ್ಮಿ, ಉಪನ್ಯಾಸಕರಾದ ಶ್ರುತಿ, ಪುಷ್ಪಾ ಉಪಸ್ಥಿತರಿದ್ದರು. ಫೆಲಿಸಿಟಾ ಸ್ವಾಗತಿಸಿದರು, ಬೆನಕ ಕಾರ್ಯಕ್ರಮ ನಿರೂಪಿಸದರು. ಆಳ್ವಾಸ್ ಸ್ನಾತಕೋತ್ತರ ಕೇಂದ್ರದ ಜೈವಿಕ ತಂತ್ರಜ್ಞಾನ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಂದ ಜೀವ ವೈವಿಧ್ಯತೆ ದಾಖಲೀಕರಣ
ಆಳ್ವಾಸ್ ಕ್ಯಾಂಪಸ್‍ನಲ್ಲಿರುವ ಜೀವ ವೈವಿಧ್ಯತೆಯನ್ನು ದಾಖಲೀಕರಣಗೊಳಿಸಲು ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರ ನಿರ್ಧರಿಸಿದ್ದು ಇದಕ್ಕಾಗಿ ವಿದ್ಯಾರ್ಥಿ ತಂಡಗಳನ್ನು ರಚಿಸಲಾಗಿದೆ. 2018ರ ಮಾರ್ಚ್ ತಿಂಗಳಿನಲ್ಲಿ ಈ ಯೋಜನೆಯನ್ನು ಪೂರ್ಣಗೊಳ್ಳಬಹುದೆಂದು ಪ್ರಾಂಶುಪಾಲ ಡಾ. ಕುರಿಯನ್ ತಿಳಿಸಿದರು. ವಿಶೇಷೋಪನ್ಯಾಸದಲ್ಲಿ ವೈಜ್ಞಾನಿಕ ದಾಖಲೀಕರಣದ ಬಗ್ಗೆ ಹರೀಶ್ ಭಟ್ ಮಾಹಿತಿ ನೀಡಿದರು. ನಂತರ ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಕಾರ್ಯಗಳನ್ನು ಮಾಡಿಸಲಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News