ಮಲೇಶ್ಯ ಶಾಲೆಯಲ್ಲಿ ಬೆಂಕಿ ದುರಂತ: ಇಬ್ಬರ ಬಂಧನ
ಕೌಲಾಲಂಪುರ (ಮಲೇಶ್ಯ),ಸೆ. 28: ಮಲೇಶ್ಯದ ಇಸ್ಲಾಮಿಕ್ ಧಾರ್ಮಿಕ ಶಾಲೆಯೊಂದರಲ್ಲಿ ಇತ್ತೀಚೆಗೆ ಸಂಭವಿಸಿದ್ದ ಬೀಕರ ಅಗ್ನಿ ದುರಂತಕ್ಕೆ ಸಂಬಂಧಿಸಿ ಇಬ್ಬರು ಹದಿಹರೆಯದವರ ವಿರುದ್ಧ ಪೊಲೀಸರು ಗುರುವಾರ ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.
ಮಲೇಶ್ಯ ರಾಜಧಾನಿ ಕೌಲಾಲಂಪುರದ ಧಾರ್ಮಿಕ ಶಾಲೆಯಲ್ಲಿ ಸೆಪ್ಟಂಬರ್ 14ರಂದು ಸಂಭವಿಸಿದ ಬೆಂಕಿ ದುರಂತದಲ್ಲಿ 23 ಮಂದಿ ಮೃತಪಟ್ಟಿದ್ದಾರೆ. ಅವರ ಪೈಕಿ ಹೆಚ್ಚಿನವರು ಬಾಲಕರು.
ಮೂರು ಮಹಡಿಗಳ ಕಟ್ಟಡದ ತುದಿಯ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನಿದ್ರಿಸುತ್ತಿದ್ದರು.
ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ದ್ವೇಷ ಹೊಂದಿದ್ದ 12ರಿಂದ 18 ವರ್ಷ ವಯಸ್ಸಿನ ಏಳು ಯುವಕರ ತಂಡ ಧಾರ್ಮಿಕ ಶಾಲೆಗೆ ಬೆಂಕಿ ಕೊಟ್ಟಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ತಂಡದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಶಾಲೆಯ ವಿದ್ಯಾರ್ಥಿಗಳಾಗಿದ್ದ ಅವರು ಶಾಲೆಯ ಪಕ್ಕದಲ್ಲೇ ಇರುವ ಮನೆಗಳಲ್ಲಿ ವಾಸಿಸುತ್ತಿದ್ದರು ಹಾಗೂ ಅಂದು ಶಾಲೆಗೆ ಹೋಗಿರಲಿಲ್ಲ.
ಆರೋಪ ಎದುರಿಸುತ್ತಿರುವ ಯುವಕರು ಮಾದಕ ದ್ರವ್ಯ ಸೇವಿಸಿರುವುದು ಪರೀಕ್ಷೆಗಳಲ್ಲಿ ದೃಢಪಟ್ಟಿದೆ ಎಂದು ಆರೋಪಪಟ್ಟಿ ಹೇಳಿದೆ.