ಪತ್ರಕರ್ತರಾದ ಸರ್ದೇಸಾಯಿ,ರವೀಶ್‌ ಕುಮಾರ್ ಗೆ ಭದ್ರತೆ ಒದಗಿಸಲು ಆಗ್ರಹ

Update: 2017-09-28 16:30 GMT

ಮುಂಬೈ,ಸೆ.28: ಸಾಮಾಜಿಕ ಮಾಧ್ಯಮಗಳಲ್ಲಿ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿರುವ ಹಿರಿಯ ಪತ್ರಕರ್ತರಾದ ರಾಜ್ ದೀಪ್ ಸರ್ದೇಸಾಯಿ ಮತ್ತು ರವೀಶ್ ಕುಮಾರ್ ಅವರ ಸುರಕ್ಷತೆಯ ಬಗ್ಗೆ ಕೇಂದ್ರ ಗೃಹಸಚಿವ ರಾಜ್ ನಾಥ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಕಳವಳಗಳನ್ನು ವ್ಯಕ್ತಪಡಿಸಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಅಶೋಕ ಚವಾಣ್ ಅವರು, ಈ ಇಬ್ಬರು ಪತ್ರಕರ್ತರ ಸುರಕ್ಷತೆಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಗೌರಿ ಲಂಕೇಶ್ ರಂತಹ ಪತ್ರಕರ್ತರು ಮತ್ತು ನರೇಂದ್ರ ದಾಭೋಲ್ಕರ್, ಎಂ.ಎನ್. ಕಲಬುರ್ಗಿ ಮತ್ತು ಗೋವಿಂದ ಪನ್ಸಾರೆಯವರಂತಹ ವಿಚಾರವಾದಿಗಳ ಹತ್ಯೆಗಳು ‘ಅಪಾಯಕಾರಿ ಪ್ರವೃತ್ತಿ’ ಎಂದು ಬಣ್ಣಿಸಿರುವ ಅವರು, ಈ ಕೊಲೆಗಳು ಚುನಾಯಿತ ಜನಪ್ರತಿನಿಧಿಗಳಾಗಿ ಸಂಸತ್ತಿನಲ್ಲಿ ಕುಳಿತಿರುವ ನಮ್ಮೆಲ್ಲರಿಗೂ ನಾಚಿಕೆಗೇಡಿನ ವಿಷಯವಾಗಿದೆ ಎಂದಿದ್ದಾರೆ.

ಸರ್ದೇಸಾಯಿ ಮತ್ತು ರವೀಶ್ ಪ್ರಜಾಸತ್ತಾತ್ಮಕ ರೀತಿಯಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ಅವರಿಗೆ ಯಾವುದೇ ದೈಹಿಕ ಹಾನಿಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News