40 ವರ್ಷಗಳಿಂದ ಮೆದುಳುಜ್ವರದಿಂದಾಗಿ ಸಾವುಗಳು ಸಂಭವಿಸುತ್ತಿವೆ, ಈಗ ಗದ್ದಲವೇಕೆ?
ಹೊಸದಿಲ್ಲಿ, ಸೆ. 29: ಮೆದುಳುಜ್ವರದಿಂದಾಗಿ 40 ವರ್ಷಗಳಿಂದ ಅನೇಕ ಸಾವುಗಳು ಸಂಭವಿಸುತ್ತಿದ್ದು, ಈ ವಿಚಾರದಲ್ಲಿ ಈಗ ಯಾಕೆ ಗದ್ದಲವೇರ್ಪಡಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.
ಗೋರಖ್ ಪುರದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ 60 ಮಕ್ಕಳು ಸಾವನ್ನಪ್ಪಿದ ಒಂದು ತಿಂಗಳ ನಂತರ ಮುಖ್ಯಮಂತ್ರಿಯ ಈ ಹೇಳಿಕೆ ಬಂದಿದೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಆದಿತ್ಯನಾಥ್, ತಮ್ಮ ಸರಕಾರವನ್ನು ಈ ವಿಚಾರದಲ್ಲಿ ಏಕೆ ಟೀಕಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.
"ಗೋರಖ್ ಪುರ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಸಾವುಗಳು ಸಂಭವಿಸಿದೆಯೆಂದು ಸಾಬೀತಾಗಿದೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಮೇ ತಿಂಗಳಲ್ಲಿ 92 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ರಾಜ್ಯದ ಇಪ್ಪತ್ತು ಜಿಲ್ಲೆಗಳಲ್ಲಿ ಮಕ್ಕಳ ಐಸಿಯು ಸ್ಥಾಪಿಸಲಾಗಿದೆ. ಮೆದುಳು ಜ್ವರ ಪ್ರಕರಣಗಳನ್ನು ಕಡಿಮೆಗೊಳಿಸಲು ಆಸ್ಪತ್ರೆಗಳಿಗೆ ಅಗತ್ಯ ಔಷಧಿಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರವು ದೇಶದ ಅರ್ಥವ್ಯವಸ್ಥೆಯನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಆದಿತ್ಯನಾಥ್, ಭಾರತವು ಈಗ ಅತ್ಯಧಿಕ ವೇಗದಿಂದ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ ಎಂದರು.
"ಆರ್ಥಿಕ ಕ್ಷೇತ್ರದಲ್ಲಿ ಸರಕಾರ ಕೈಗೊಂಡಿರುವ ಕ್ರಮಗಳನ್ನು ದೇಶದ ಜನರು ಹಾಗೂ ವಿಶ್ವವೇ ಮೆಚ್ಚಿದೆ ಎಂದರು.
ನೋಟು ಅಮಾನ್ಯೀಕರಣವನ್ನೂ ಪ್ರಶಂಸಿಸಿದ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವವಿಲ್ಲದೇ ಹೋಗಿದ್ದರೆ ಈ ಯೋಜನೆ ಯಶಸ್ವಿಯಾಗುತ್ತಿರಲಿಲ್ಲ ಎಂದರು.
ರಾಮ ಮಂದಿರ ವಿಚಾರವನ್ನು ಕೂಡ ಪ್ರಸ್ತಾಪಿಸಿದ ಅವರು, ಈ ಬಗ್ಗೆ ನ್ಯಾಯಾಲಯದ ತೀರ್ಪಿಗೆ ಜನರು ಕಾಯಬೇಕೆಂದು ಹೇಳಿದರು. "ಜನರಿಗೆ ರಾಮ ಮಂದಿರ ನಿರ್ಮಾಣವಾಗಬೇಕೆಂದಿದೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿದೆ. ತೀರ್ಪಿಗಾಗಿ ನಾವು ಕಾಯಬೇಕು. ಆದರೆ ಅಯೋಧ್ಯೆ ಮಂದಿರದ ಮಹತ್ವವನ್ನು ಕಡೆಗಣಿಸುವ ಹಾಗಿಲ್ಲ'' ಎಂದರು.