ಜೋಧಪುರ ವಿಮಾನ ನಿಲ್ದಾಣದಲ್ಲಿ ರಾಮ್ ದೇವ್ ಗೆ ಜನರಿಂದ ಮಹಾ ಮಂಗಳಾರತಿ

Update: 2017-09-29 13:03 GMT

ರಾಜಸ್ತಾನ, ಸೆ.29: ಪತಂಜಲಿಯ ಸ್ಥಾಪಕ, ಯೋಗಗುರು ಬಾಬಾ ರಾಮ್ ದೇವ್ ವಿರುದ್ಧ ಜನರು ಧಿಕ್ಕಾರ ಕೂಗಿದ ಘಟನೆ ಇಲ್ಲಿನ ಜೋಧಪುರ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎನ್ನಲಾಗಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜೋಧಪುರ ವಿಮಾನ ನಿಲ್ದಾಣದಿಂದ ಬಾಬಾ ರಾಮ್ ದೇವ್ ಹೊರಬರುತ್ತಲೇ ಅಲ್ಲಿ ನೆರೆದಿದ್ದ ಜನರು ಯೋಗಗುರು ವಿರುದ್ಧ ಘೋಷಣೆಗಳನ್ನು ಕೂಗಿದ್ದು. ಇದರಿಂದ ಮುಜುಗರಕ್ಕೊಳಗಾದ ಅವರು ವಿಮಾನ ನಿಲ್ದಾಣದ ಒಳಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳಿಗೆ ತನ್ನ ಹೇಳಿಕೆಯನ್ನು ನೀಡುವ ಮೊದಲು ಅಥವಾ ನಂತರ ಈ ಘಟನೆ ನಡೆದಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ರಾಮ್ ದೇವ್ ಜೋಧಪುರಕ್ಕೆ ಭೇಟಿ ನೀಡಿದ ಸಂದರ್ಭ ಈ ಘಟನೆ ನಡೆದಿದೆ. ರಾಮ್ ದೇವ್ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಅಲ್ಲಿ ಸೇರಿದ್ದ ಜನರು, “ನರೇಂದ್ರ ಮೋದಿ ಹಾಯ್ ಹಾಯ್, ಬಿಜೆಪಿ ಕೆ ದಲಾಲ್ (ದಲ್ಲಾಳಿ) ಹಾಯ್ ಹಾಯ್, ದೇಶ್ ಕಾ ಲುಟೇರಾ (ಲೂಟಿಕೋರ) ನರೇಂದ್ರ ಮೋದಿ ಹಾಯ್ ಹಾಯ್” ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಈ ಸಂದರ್ಭ ರಾಮ್ ದೇವ್ ಜನರೊಂದಿಗೆ ಮಾತನಾಡಲು ಯತ್ನಿಸಿದ್ದು, "ನಿಮ್ಮ ಮಾತುಗಳನ್ನು ಕೇಳುವುದಿಲ್ಲ" ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ಜನರನ್ನು ಎದುರಿಸಲಾಗದೆ ರಾಮ್ ದೇವ್ ಮತ್ತೆ ವಿಮಾನ ನಿಲ್ದಾಣದ ಒಳಗೆ ಹೋಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಈ ಘಟನೆ ಯಾವಾಗ ನಡೆದಿದೆ ಎನ್ನುವುದು ಇನ್ನೂ ಖಚಿತಗೊಂಡಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News