ಮುಂಬೈ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಕರಾವಳಿ ಮೂಲದ ಇಬ್ಬರು ಮೃತ್ಯು

Update: 2017-09-30 05:02 GMT
ಸುಜಾತಾ ಪಿ. ಆಳ್ವ, ಸುಮಲತಾ ಸಿ.ಶೆಟ್ಟಿ 

ಮುಂಬೈ, ಸೆ.29: ಮುಂಬೈಯ ಸ್ಥಾನೀಯ ರೈಲು ಸಂಚಾರದ ತ್ರಿಮಾರ್ಗಗಳಲ್ಲಿ ಒಂದಾದ ಮಧ್ಯ ರೈಲ್ವೆಯ ಪರೇಲ್  ಎಲ್ಫಿನ್‍ಸ್ಟನ್ ರೈಲ್ವೇ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಮುಂಬೈಯ ಬಂಟ್ಸ್ ಸಂಘದ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿ ಸದಸ್ಯೆಯರಿಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಸುಜಾತಾ ಪಿ.ಆಳ್ವ (42) ಮತ್ತು ಸುಮಲತಾ ಸಿ.ಶೆಟ್ಟಿ (45) ಎಂದು ಗುರುತಿಸಲಾಗಿದೆ.

ಸುಜಾತಾ ಪಿ.ಆಳ್ವ ಮತ್ತು ಸುಮಲತಾ ಸಿ.ಶೆಟ್ಟಿ ಮುಂಬೈಯ ಬಂಟ್ಸ್ ಸಂಘದ ಕುರ್ಲಾ ಭಾಂಡೂಪ್ ಪ್ರಾದೇಶಿಕ ವಿಭಾಗೀಯ ಸಮಿತಿಯ ಸಕ್ರಿಯ ಸದಸ್ಯೆಯರಾಗಿದ್ದು, ಕಾಂಜೂರ್‍ಮಾರ್ಗ ಪೂರ್ವದ ನೆಹರೂ ನಗರ ನಿವಾಸಿಯಾಗಿದ್ದರು. ದಸರಾ ಹಬ್ಬದ ಪೂಜೆಗೆ ಹೂವು ಖರೀದಿಸಲೆಂದೇ ಹೋದವರು ಈ ಅವಘಡದಲ್ಲಿ ಮೃತಪಟ್ಟಿದ್ದಾರೆ.

ಸುಮಲತಾ ಶೆಟ್ಟಿ: ಮೂಲತಃ ಇನ್ನಾ ಮಡ್ಮಾಣ್ ಪಾದೆಮನೆ (ತಾಯಿಮನೆ), ಕಡಂದಲೆ ಹೊಯ್ಗೆಮನೆ ಕೃಷ್ಣಶೆಟ್ಟಿ ದಂಪತಿಯ ಪುತ್ರಿ. ಪ್ರತಿಭಾನ್ವಿತೆ ಮತ್ತು ಅತ್ಯುತ್ತಮ ಕ್ರೀಡಾಪಟುವಾಗಿದ್ದರು. ಪತಿ ಎಳಿಯಾಲು ಶೆಟ್ಟಿ ಬೆಟ್ಟುಮನೆತನದ  ಚಂದ್ರಶೇಖರ್ ಶೆಟ್ಟಿ ಸೀಮೆನ್ಸ್ ಉದ್ಯೋಗಿಯಾಗಿದ್ದು, ಏಕೈಕ ಪುತ್ರಿ ನಿಧಿ ಶೆಟ್ಟಿ ಸಯಾನ್‍ನಲ್ಲಿ ಬಿಎಸ್ಸಿ ಓದುತ್ತಿದ್ದಾರೆ.

ವಾಮಂಜೂರು ಮೂಲದವರಾದ ಸುಜಾತಾ ಆಳ್ವ ಅತ್ಯುತ್ತಮ ರಂಗಭೂಮಿ ಕಲಾವಿದೆ. ಇವರ ಪತಿ ಪುರುಷೋತ್ತಮ  ಆಳ್ವ ಆದಾಯ ತೆರಿಗೆ ಉನ್ನತಾಧಿಕಾರಿಯಾಗಿದ್ದು ಮತ್ತು ಇಬ್ಬರು ಪುತ್ರಿಯರಾದ  ಪ್ರಜ್ಞಾ ಆಳ್ವ ಮತ್ತು ಪ್ರೇರಣಾ  ಆಳ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಘಟನೆಯ ವಿವರ: ಎಂದಿನಂತೆ ಸ್ಥಳೀಯ (ಲೋಕಲ್) ರೈಲ್ವೆಯ ಮೂಲಕ ಕೆಲಸಕ್ಕೆ ತೆರಳುತ್ತಿದ್ದ ಪ್ರಯಾಣಿಕರು ಪಾದಚಾರಿ ಸೇತುವೆಯಲ್ಲಿ ಮೇಲಕ್ಕೆ ಸಾಗುತ್ತಿದ್ದಂತೆ ಏಕಾಏಕಿ ಭಾರೀ ಮಳೆ ಸುರಿಯಲಾರಂಭಿ ಸಿತು ಅಷ್ಟರಲ್ಲೇ ಕಿಡಿಗೇಡಿಯೊಬ್ಬ ಶಾರ್ಟ್  ಸರ್ಕ್ಯೂಟ್ ಆಗಿ ಸೇತುವೆ ಕುಸಿದು ಬೀಳುತ್ತಿದೆ ಎಂದು ಬೊಬ್ಬಿಟ್ಟಿದ್ದಾನೆ. ಇದನ್ನು ಕೇಳಿದ್ದೇ ತಡ  ಜನರೆಲ್ಲರೂ ಓಡಲು ಯತ್ನಿಸಿದ್ದಾರೆ. ಈ ಸಂದರ್ಭ 22 ಮಂದಿ ಮೃತಪಟ್ಟಿದ್ದು, 35 ಮಂದಿ ಗಾಯಗೊಂಡಿದ್ದಾರೆ.

ಸಂತಾಪ: ಸುಜಾತಾ ಆಳ್ವ ಹಾಗು ಸುಮಲತಾ ಅವರ ನಿಧನಕ್ಕೆ  ಬಂಟ್ಸ್ ಸಂಘ ಮುಂಬೈ ಅಧ್ಯಕ್ಷ ಪ್ರಭಾಕರಎಲ್.ಶೆಟ್ಟಿ,  ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌ. ಪ್ರ. ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ,ಗೌ. ಕೋಶಾಧಿಕಾರಿ ಸಿಎ.ಐ.ಆರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಕುರ್ಲಾ ಭಾಂಡೂಪ್ ಪ್ರಾದೇಶಿಕ  ವಿಭಾಗೀಯ ಸಮಿತಿ ಅಧ್ಯಕ್ಷ ಸಿಎ. ವಿಶ್ವನಾಥ ಶೆಟ್ಟಿ, ಮಾಜಿ ಕಾರ್ಯಧ್ಯಕ್ಷ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಮಹಿಳಾ ಕಾರ್ಯಾಧ್ಯಕ್ಷೆ ಸರೋಜ ಶೆಟ್ಟಿ, ಎಂ.ಡಿ ಶೆಟ್ಟಿ, ಬಿ.ವಿವೇಕ್ ಶೆಟ್ಟಿ,ಸುಧಾಕರ್ ಎಸ್.ಹೆಗ್ಡೆ, ಐಕಳ ಹರೀಶ್ ಶೆಟ್ಟಿ, ಡಾ. ಸುನೀತಾ ಎಂ.ಶೆಟ್ಟಿ, ನ್ಯಾ. ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ಸಿಎ. ಐ.ಆರ್ ಶೆಟ್ಟಿ, ಜಯರಾಮ ಎನ್.ಶೆಟ್ಟಿ, ಶ್ಯಾಮ ಎನ್.ಶೆಟ್ಟಿ,  ನಗ್ರಿಗುತ್ತು  ವಿವೇಕ್ ಶೆಟ್ಟಿ, ಚೆಲ್ಲಡ್ಕ ಕುಸುಮೋಧರ ಶೆಟ್ಟಿ,  ಕಡಂದಲೆ ಸುರೇಶ್ ಎಸ್.ಭಂಡಾರಿ,  ಕುರ್ಲಾ ದಿವಾಕರ್ ಶೆಟ್ಟಿ,  ಬಿ.  ಬಾಲ ಚಂದ್ರರಾವ್, ನಾರಾಯಣ ಶೆಟ್ಟಿ ನಂದಳಿಕೆ, ಸಾ.ದಯಾ ಮೋಹನ್ ಮಾರ್ನಾಡ್, ಇನ್ನಬಾಳಿಕ ನವೀನ್ ಶೆಟ್ಟಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Writer - ರೋನ್ಸ್ ಬಂಟ್ವಾಳ್

contributor

Editor - ರೋನ್ಸ್ ಬಂಟ್ವಾಳ್

contributor

Similar News