ಐಶಾರಾಮಿ ಬುಲೆಟ್ ಟ್ರೈನ್ ಬೇಕಿಲ್ಲ, ಮೊದಲು ಸೇತುವೆ ದುರಸ್ತಿಪಡಿಸಿ: ಕಾಲ್ತುಳಿತ ದುರಂತದಲ್ಲಿ ಬದುಕುಳಿದವರ ಮಾತು

Update: 2017-09-29 15:40 GMT

ಮುಂಬೈ, ಸೆ.29: “ಬುಲೆಟ್ ರೈಲು ಬರಲಿರುವ ನಗರದಲ್ಲಿ ಸುರಕ್ಷಿತ ರೈಲ್ವೆ ಸೇತುವೆಯಿಲ್ಲ” …. ಇದು ಕೋಪೋದ್ರಿಕ್ತ ಮುಂಬೈ ನಿವಾಸಿಗಳ ಮಾತು.

ಇಂದು ಬೆಳಗ್ಗೆ ಎಲ್ಫಿನ್ ಸ್ಟನ್ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ಈ ದುರ್ಘಟನೆ ನಡೆಯುವುದಕ್ಕೂ ಮೊದಲೇ ಹಲವಾರು ಮಂದಿ ಟ್ವಿಟ್ಟರ್ ಮೂಲಕ, ಪತ್ರಗಳ ಮೂಲಕ ರೈಲ್ವೆ ಸೇತುವೆಯ ದುರವಸ್ತೆಯ ಬಗ್ಗೆ ವಿವರಿಸಿದ್ದರು. ಒಂದು ವರ್ಷದ ಮೊದಲೇ ಟ್ವಿಟ್ಟರ್ ಖಾತೆದಾರರೊಬ್ಬರು ಪ್ರಧಾನ ಮಂತ್ರಿ ಹಾಗು ಮಾಜಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು.

ನಾಲ್ಕು ರೈಲುಗಳು ಒಮ್ಮೆಗೇ ನಿಲ್ದಾಣಕ್ಕೆ ಆಗಮಿಸಿದ್ದರಿಂದ ಜನಸಂದಣಿ ಹೆಚ್ಚಿತ್ತು. ಭಾರೀ ಮಳೆಯೂ ಸುರಿಯುತ್ತಿದ್ದುದರಿಂದ ಕಾಲ್ಸೇತುವೆಯ ಮೂಲಕ ಪ್ರಯಾಣಿಕರು ಸಾಗುತ್ತಿದ್ದರು. ಈ ಸಂದರ್ಭ ಶಾರ್ಟ್ ಸರ್ಕೂಟ್ ನಡೆದಿದೆ. ಸೇತುವೆ ಕುಸಿಯುತ್ತಿದೆ ಎಂದು ಯಾರೋ ಬೊಬ್ಬಿಟ್ಟದ್ದರಿಂದ ಜನರು ಓಡತೊಡಗಿದ್ದಾರೆ. ಈ ಸಂದರ್ಭ ಕಾಲ್ತುಳಿತ ಸಂಭವಿಸಿದೆ.

“ಜನರಿಗೆ ಐಶಾರಾಮಿ ಬುಲೆಟ್ ರೈಲು ಬೇಕಿಲ್ಲ… ಮೊದಲು ನಾವು ದಿನನಿತ್ಯ ನಡೆಯುವ ಸೇತುವೆಯನ್ನು ದುರಸ್ತಿಪಡಿಸಿ” ಎಂದು ಅವಘಡದಲ್ಲಿ ಬದುಕುಳಿದ ವ್ಯಕ್ತಿಯೊಬ್ಬರು ಹೇಳುತ್ತಾರೆ.

“ನಿಮಗೆ ಬುಲೆಟ್ ಟ್ರೈನ್ ಗಾಗಿ ಹಣವಿದೆ. ಆದರೆ ಸೇತುವೆ ದುರಸ್ತಿಗೆ ಹಣವಿಲ್ಲ. ನೀವು ಬಡ ಪ್ರಯಾಣಿಕರನ್ನು ಸಾಯಲು ಬಿಟ್ಟಿದ್ದೀರಿ” ಎಂದು ಶಿವಸೇನೆ ಈ ದುರಂತಕ್ಕೆ ಸಂಬಂಧಿಸಿ ಕೇಂದ್ರ ಸರಕಾರವನ್ನು ಟೀಕಿಸಿದೆ.

ಈ ಸೇತುವೆಯ ದುರಸ್ತಿಗೆ ಸಂಬಂಧಿಸಿ ಅರವಿಂದ್ ಸಾವಂತ್ ಎಂಬವರು ಮಾಜಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರವನ್ನು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಭು ಸೇತುವೆಯ ಅಗಲವನ್ನು ಶೀಘ್ರದಲ್ಲಿ ವಿಸ್ತರಿಸಲಾಗುವುದು” ಎಂದಿದ್ದರು. ಆದರೆ ಯಾವುದೇ ಕೆಲಸ ನಡೆದಿರಲಿಲ್ಲ. “ಇದು ಕೇವಲ ನಿರ್ಲಕ್ಷ್ಯತನವಲ್ಲ. ಇದು ಕರ್ತವ್ಯಲೋಪ”  ಎಂದು ಸಾವಂತ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News