ಜಗದೀಶ್ ಕಾರಂತ್ ಗೆ ಮಧ್ಯಂತರ ಜಾಮೀನು

Update: 2017-09-30 05:33 GMT

ಪುತ್ತೂರು, ಸೆ. 30: ಪುತ್ತೂರಿನಲ್ಲಿ ಸೆ.15ರಂದು ನಡೆದ ಪ್ರತಿಭಟನಾ ಸಭೆಯಲ್ಲಿ ಸಂಪ್ಯ ಠಾಣೆ ಎಸ್ ಐ ಮತ್ತು ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ರನ್ನು ಮಧ್ಯರಾತ್ರಿ ಸುಮಾರು 1:30ಕ್ಕೆ ಪುತ್ತೂರು ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಮಧ್ಯಂತರ ಜಾಮೀನು ಮಂಜೂರುಗೊಳಿಸಿದ್ದಾರೆ.

ಶುಕ್ರವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಗದೀಶ್ ಕಾರಂತ್ ರನ್ನು ವಶಕ್ಕೆ ಪಡೆಯಲಾಗಿತ್ತು. ರಾತ್ರಿ ಸುಮಾರು 12:30ಕ್ಕೆ ಪುತ್ತೂರು ನಗರ ಠಾಣೆಗೆ ಜಗದೀಶ್ ಕಾರಂತ್ ರನ್ನು ಕರೆತರಲಾಯಿತು. ಅಲ್ಲಿ ವಿಚಾರಣೆ ನಡೆಸಿ ಬಳಿಕ ಇಲ್ಲಿನ ಸರಕಾರಿ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಆ ಬಳಿಕ ನಗರದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ಸೆಕ್ಷನ್ 41ರ ಅಡಿಯಲ್ಲಿ ಆರೋಪಿಗೆ ನೊಟೀಸ್ ಜಾರಿ ಮಾಡುವ ಮೊದಲು ಬಂಧನ ನಡೆಸಿದ್ದು, ಕಾನೂನು ನಿಯಂತ್ರಣ ಮೀರಿ ವರ್ತಿಸಿರುವುದು, ನ್ಯಾಯಾಲಯಕ್ಕೆ ಸತತ ರಜೆ ಹಾಗೂ ಕಾರಂತರ ಆರೋಪದ ಸ್ಥಿತಿ ಗಮನಿಸಿ ಮಧ್ಯಂತರ ಜಾಮೀನು ಮಂಜೂರುಗೊಳಿಸುವಂತೆ ನ್ಯಾಯವಾದಿ ಮಹೇಶ್ ಕಜೆ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಕಾರಂತ್ ಗೆ ಮಧ್ಯಂತರ ಜಾಮೀನು ನೀಡಿರುವುದಾಗಿ ತಿಳಿದುಬಂದಿದೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಅ.3ಕ್ಕೆ ಕೈಗೆತ್ತಿಕೊಂಡಿದೆ. 

ಕಾರಂತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಪರಾಹ್ನ ಕಾರಂತ್ ರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದ ದ.ಕ. ಜಿಲ್ಲಾ ಅಪರಾಧ ಪತ್ತೆ ದಳ ಪೊಲೀಸರು ಅಲ್ಲಿಂದ ಕರೆತಂದು ಪುತ್ತೂರು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದರು. ಈ ನಡುವೆ ಪುತ್ತೂರು ಬಸ್ ನಿಲ್ದಾಣದಲ್ಲಿ ಬಿಜೆಪಿ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾರಂತ್ ರನ್ನು ತಕ್ಷಣವೇ ಬಿಡುಗಡೆ ಮಾಡದಿದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದರು.

ವಶಕ್ಕೆ ಪಡೆದ ದಿನವೇ ಬೆಂಗಳೂರಿನಿಂದ ಪುತ್ತೂರಿಗೆ ಬಂದು, ಅಲ್ಲಿನ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಗಿಸಿ, ಸಾಕ್ಷ್ಯ ಸಂಗ್ರಹ ಮಾಡಿ ಬಳಿಕ ಆರೋಪಿಯ ವೈದ್ಯಕೀಯ ತಪಾಸಣೆ ಮುಗಿಸಿ ಅದೇ ರಾತ್ರಿ ನ್ಯಾಯಾಧೀಶರೆದುರು ಹಾಜರುಪಡಿಸಿದ ದ.ಕ.ಪೊಲೀಸರು ಅತ್ಯಂತ 'ಕ್ಷಿಪ್ರ ಕಾರ್ಯಾಚರಣೆ' ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News