“10 ತಲೆಯ ರಾವಣನಿಗೆ ಎಷ್ಟು ಆಧಾರ್ ಕಾರ್ಡ್ ನೀಡುತ್ತೀರಿ” ಎಂದು ಪ್ರಶ್ನಿಸಿದ ಟ್ವಿಟ್ಟರ್ ಖಾತೆದಾರ!
ಹೊಸದಿಲ್ಲಿ, ಸೆ.30: ಟ್ವಿಟ್ಟರ್ ಖಾತೆದಾರರಿಗೆ UIDAI ಅಥವಾ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಟ್ವಿಟ್ಟರ್ ಖಾತೆ ವಿಜಯದಶಮಿಯ ಶುಭ ಹಾರೈಸಿತ್ತು. ಈ ಸಂದರ್ಭ ಟ್ವಿಟ್ಟರ್ ಖಾತೆದಾರನೋರ್ವ ಕೇಳಿದ ಪ್ರಶ್ನೆಗೆ UIDAI ಖಾತೆ ನೀಡಿದ ಉತ್ತರ ಟ್ವಿಟ್ಟರಿಗರ ಪ್ರಶಂಸೆಗೆ ಪಾತ್ರವಾಗಿದೆ.
ಆಧಾರ್ ಚಿಹ್ನೆಯಿಂದ ಹೊರಟ ಬಾಣಗಳು ರಾವಣನ ಹತ್ತು ತಲೆಯೆಡೆಗೆ ನುಗ್ಗುತ್ತಿರುವ ಇಲಸ್ಟ್ರೇಶನ್ ಫೋಟೊವೊಂದನ್ನು ಪೋಸ್ಟ್ ಮಾಡಿದ್ದ UIDAI ಜನತೆಗೆ ವಿಜಯದಶಮಿಯ ಶುಭ ಹಾರೈಸಿತ್ತು.
ಈ ಸಂದರ್ಭ ಟ್ವಿಟ್ಟರ್ ಖಾತೆದಾರನೊಬ್ಬ ಆಧಾರ್ ಅಫಿಶಿಯಲ್ ಪೇಜ್ ಪೋಸ್ಟ್ ಮಾಡಿದ್ದ ಫೋಟೊವನ್ನು ಉಲ್ಲೇಖಿಸಿ, “10 ತಲೆಯ ರಾವಣನಿಗೆ ಎಷ್ಟು ಆಧಾರ್ ಕಾರ್ಡ್ ನೀಡುತ್ತೀರಿ” ಎಂದು ಪ್ರಶ್ನಿಸಿದ್ದ.
ಇದಕ್ಕೆ ಪ್ರತಿಕ್ರಿಯಿಸಿದ UIDAI ಟ್ವಿಟ್ಟರ್ ಖಾತೆ, “ರಾವಣ ಭಾರತದ ನಿವಾಸಿಯಲ್ಲವಾದ್ದರಿಂದ ಅವನಿಗೆ ಆಧಾರ್ ಕಾರ್ಡ್ ನೀಡಲಾಗುವುದಿಲ್ಲ” ಎಂದಿತ್ತು. UIDAI ಈ ಪ್ರತಿಕ್ರಿಯೆಗೆ ಟ್ವಿಟ್ಟರಿಗರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಹೆಚ್ಚಿನವರು ಇದರಲ್ಲಿ ಆಧಾರ್ ನ ಟ್ವಿಟ್ಟರ್ ಖಾತೆಯನ್ನು ನಿರ್ವಹಿಸುತ್ತಿರುವ ವ್ಯಕ್ತಿಯನ್ನು ಪ್ರಶಂಸಿಸಿದ್ದಾರೆ. ಕೀಟಲೆಯ ಪ್ರಶ್ನೆಯೊಂದಕ್ಕೆ ಅಷ್ಟೇ ಹಾಸ್ಯಭರಿತವಾದ ಜಾಣತನದ ಉತ್ತರ ನೀಡಿದ UIDAI ಖಾತೆಯ ಟ್ವೀಟ್ 2,400 ಬಾರಿ ರಿಟ್ವೀಟ್ ಆಗಿದೆ.