ಸಿರಿಯಾದಲ್ಲಿ ವಾಯುದಾಳಿಗೆ ಕನಿಷ್ಠ 28 ನಾಗರಿಕರ ಬಲಿ
ಬೈರೂತ್, ಸೆ.30: ವಾಯವ್ಯ ಸಿರಿಯಾದಲ್ಲಿ ಸರಕಾರಿ ಸೇನೆ ಹಾಗೂ ರಶ್ಯನ್ ಪಡೆಗಳು ನಡೆಸಿದ ವಾಯುದಾಳಿಗಳಲ್ಲಿ ಕನಿಷ್ಠ 28 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.
ಟರ್ಕಿ ಗಡಿಗೆ ತಾಗಿಕೊಂಡಿರುವ ಸಿರಿಯದ ಇದ್ಲಿಬ್ ಪ್ರಾಂತದಲ್ಲಿರುವ ಅಮಾನಾಝ್ ಪಟ್ಟಣದಲ್ಲಿ ಶುಕ್ರವಾರ ರಾತ್ರಿಯಿಡೀ ವಾಯುದಾಳಿ ನಡೆದಿದ್ದು, ಮೃತ ನಾಗರಿಕರಲ್ಲಿ ಕನಿಷ್ಠ ನಾಲ್ಕು ಮಂದಿ ಮಕ್ಕಳು ಕೂಡಾ ಸೇರಿದ್ದಾರೆಂದು ಮಾನವಹಕ್ಕುಗಳ ಸಿರಿಯ ವೀಕ್ಷಣಾಕೇಂದ್ರವು ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇದ್ಲಿಬ್ ಪ್ರಾಂತದ ಬಹುತೇಕ ಪ್ರದೇಶಗಳು ಬಂಡುಕೋರರ ನಿಯಂತ್ರಣದಲ್ಲಿದ್ದು, ಆವರನ್ನು ಸದೆಬಡಿಯಲು ಸಿರಿಯ ಹಾಗೂ ಮಿತ್ರರಾಷ್ಟ್ರವಾದ ರಶ್ಯವು ಜಂಟಿಯಾಗಿ ವಾಯುದಾಳಿಗಳನ್ನು ನಡೆಸುತ್ತಿವೆ. ವಾಯುದಾಳಿಯ ಹಿನ್ನೆಲೆಯಲ್ಲಿ ಇದ್ಲಿಬ್ ಪ್ರಾಂತದಲ್ಲಿನ ಅನೇಕ ಆಸ್ಪತ್ರೆಗಳನ್ನು ಮುಚ್ಚಬೇಕಾಗಿ ಬಂದಿರುವುದಾಗಿ ಅಂತಾರಾಷ್ಟ್ರೀಯ ವೈದ್ಯಕೀಯ ಸೇವಾಸಂಸ್ಥೆಯಾದ ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಹೇಳಿದೆ.
ಸೆಪ್ಟೆಂಬರ್ 19ರಂದು ನೆರೆಯ ಹಾಮಾ ಪ್ರಾಂತದಲ್ಲಿ ಸಿರಿಯದಲ್ಲಿ ಅಲ್‌ಖಾಯ್ದಾದ ಮಾಜಿ ಬೆಂಬಲಿಗ ಗುಂಪೊಂದು ದಾಳಿ ನಡೆಸಿದ ಬಳಿಕ ಸಿರಿಯ ತನ್ನ ವಾಯುದಾಳಿಯನ್ನು ತೀವ್ರಗೊಳಿಸಿತ್ತು.