ಮ್ಯಾನ್ಮಾರ್, ಬಾಂಗ್ಲಾ ಗಡಿಯಲ್ಲಿ ಎರಡು ಚೆಕ್‌ಪೋಸ್ಟ್ ಆರಂಭಿಸಿದ ಭಾರತ
ಹೊಸದಿಲ್ಲಿ, ಅ.1: ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಎರಡು ಚೆಕ್‌ಪೋಸ್ಟ್‌ಗಳನ್ನು ಆರಂಭಿಸುವ ಮೂಲಕ ಈ ಎರಡು ದೇಶಗಳೊಂದಿಗಿನ ತನ್ನ ಸಂಬಂಧವನ್ನು ಮತ್ತಷ್ಟು ಆಪ್ತಗೊಳಿಸುವ ಕ್ರಮಕ್ಕೆ ಭಾರತ ಮುಂದಾಗಿದೆ.
ಮ್ಯಾನ್ಮಾರ್‌ನಿಂದ ಆಗಮಿಸುವ, ಸೂಕ್ತ ಪ್ರಯಾಣ ದಾಖಲೆ ಹೊಂದಿರುವ ಎಲ್ಲಾ ವರ್ಗದ ಪ್ರಯಾಣಿಕರು ಭಾರತದೊಳಗೆ ಪ್ರವೇಶಿಸಲು ಅಥವಾ ಭಾರತದಿಂದ ನಿರ್ಗಮಿಸಲು ಮಿರೆರಂನ ಲಾಂಗ್‌ಟ್ಲಾಯ್ ಜಿಲ್ಲೆಯ ರೊರಿನ್‌ಪುಯಿ ಚೆಕ್‌ಪೋಸ್ಟ್ ಅಧಿಕೃತ ವಲಸೆ ಚೆಕ್‌ಪೋಸ್ಟ್ ಆಗಿರುತ್ತದೆ ಎಂದು ಸರಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅದೇ ರೀತಿ, ಬಾಂಗ್ಲಾದೇಶದಿಂದ ಆಗಮಿಸುವ, ಸೂಕ್ತ ಪ್ರಯಾಣ ದಾಖಲೆ ಹೊಂದಿರುವ ಎಲ್ಲಾ ವರ್ಗದ ಪ್ರಯಾಣಿಕರು ಭಾರತದೊಳಗೆ ಪ್ರವೇಶಿಸಲು ಅಥವಾ ಭಾರತದಿಂದ ನಿರ್ಗಮಿಸಲು ಮಿರೆರಂನ ಲಂಗ್‌ಲೀ ಜಿಲ್ಲೆಯ ಕಾರ್‌ಪುಯಿಚ್ ಚೆಕ್‌ಪೋಸ್ಟ್ ಅಧಿಕೃತ ಚೆಕ್‌ಪೋಸ್ಟ್ ಆಗಿರುತ್ತದೆ ಎಂದು ಸರಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರೊರಿನ್‌ಪುರಿ ಮ್ಯಾನ್ಮಾರ್‌ನ ಸಿಟ್ವೆ ಬಂದರಿನಿಂದ 287 ಕಿ.ಮೀ. ದೂರದಲ್ಲಿದೆ. 2012ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮ್ಯಾನ್ಮಾರ್‌ಗೆ ಭೇಟಿ ನೀಡಿದ್ದ ಸಂದರ್ಭ ಉಭಯ ದೇಶಗಳ ಮುಖಂಡರು ಹೊರಡಿಸಿದ್ದ ಜಂಟಿ ಹೇಳಿಕೆಯಲ್ಲಿ ರೊರಿನ್‌ಪುರಿ ಚೆಕ್‌ಪೋಸ್ಟ್ ಕುರಿತ ಒಪ್ಪಂದವನ್ನೂ ಸೇರಿಸಲಾಗಿತ್ತು.
ಸೆ.5ರಂದು ಪ್ರಧಾನಿ ನರೇಂದ್ರ ಮೋದಿ ಮ್ಯಾನ್ಮಾರ್‌ಗೆ ಭೇಟಿ ನೀಡಿದ್ದರು. ಮ್ಯಾನ್ಮಾರ್‌ನೊಂದಿಗೆ ಭಾರತ 1,643 ಕಿ.ಮೀ. ಉದ್ದದ ಗಡಿಯನ್ನು ಹೊಂದಿದ್ದು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಹಾಗೂ ಮಿರೆರಂ ರಾಜ್ಯಗಳು ಈ ಗಡಿಭಾಗದಲ್ಲಿವೆ. ಬಾಂಗ್ಲಾದೊಂದಿಗೆ 4,096 ಕಿ.ಮೀ. ಉದ್ದದ ಗಡಿಯನ್ನು ಭಾರತ ಹೊಂದಿದ್ದು ಅಸ್ಸಾಂ, ತ್ರಿಪುರ, ಮಿರೆರಂ, ಮೇಘಾಲಯ ಹಾಗೂ ಪಶ್ಚಿಮ ಬಂಗಾಲ ರಾಜ್ಯಗಳು ಈ ಗಡಿಭಾಗದಲ್ಲಿವೆ.