“ನಮಗೆ ಬುಲೆಟ್ ಟ್ರೈನ್ ಬೇಡ, ಉತ್ತಮ ರೈಲ್ವೇ ವ್ಯವಸ್ಥೆ ಬೇಕು”
ಮುಂಬೈ, ಅ. 2: ನಿನ್ನೆ ಸಂಭವಿಸಿರುವ ಕಾಲ್ತುಳಿತದ ಹಿನ್ನೆಲೆಯಲ್ಲಿ ಮುಂಬೈ ಹಾಗೂ ಅಹ್ಮದಾಬಾದ್ ನಡುವೆ ಸಂಚರಿಸುವ ಕೇಂದ್ರದ ಬುಲೆಟ್ ಟ್ರೈನ್ ಯೋಜನೆ ವಿರುದ್ಧ ಆಕ್ರೋಶಗೊಂಡ ನಗರದ 12ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಚವ್ಹಾಣ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ನಮಗೆ ಬುಲೆಟ್ ಟ್ರೈನ್ ಬೇಕಾಗಿಲ್ಲ. ನಮಗೆ ಉತ್ತಮ ರೈಲ್ವೆ ವ್ಯವಸ್ಥೆ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ. ಶ್ರೇಯ ಚವ್ಹಾಣ್ ಬುಲೆಟ್ ಟ್ರೈನ್ ವಿರುದ್ಧ ಶುಕ್ರವಾರ ಸಂಜೆ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ 24 ಗಂಟೆಗಳಲ್ಲಿ 4,327 ಮಂದಿ ಸಹಿ ಹಾಕಿದ್ದಾರೆ.
ಸೆಪ್ಟಂಬರ್ 20ರಂದು ಲೋಕಲ್ ರೈಲಿನಿಂದ ಬಿದ್ದು ಜೂನಿಯರ್ ಕಾಲೇಜಿನ 17 ವರ್ಷದ ವಿದ್ಯಾರ್ಥಿನಿ ಮೃತಪಟ್ಟ ಬಳಿಕ ಬೇಸರಗೊಂಡಿರುವ ಚವ್ಹಾಣ್, ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲು ನಿರ್ಧರಿಸಿದರು. ವಿದ್ಯಾರ್ಥಿಗಳಿಗೆ ರೈಲಿನಲ್ಲೇ ಪ್ರಯಾಣಿಸುವುದು ಸಾಧ್ಯವಾಗದೇ ಇದ್ದರೆ, ಬುಲೆಟ್ ಟ್ರೈನ್ ಆರಂಭಿಸಿ ಪ್ರಯೋಜನವೇನು ಎಂದು ನಗರದ ರುಯ್ಯಾ ಕಾಲೇಜಿನ ಕಲಾ ವಿಭಾಗದ ಈ ವಿದ್ಯಾರ್ಥಿನಿ ಪ್ರಶ್ನಿಸಿದ್ದಾರೆ. ದತ್ತಾಂಶದ ಹಿನ್ನೆಲೆಯಲ್ಲಿ ಮಾತನಾಡುವುದಾದರೆ, ಮುಂಬೈ ರೈಲು ಹಳಿಗಳಲ್ಲಿ ಪ್ರತಿ ದಿನ 9 ಮಂದಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಸನ್ನಿವೇಶ ಇರುವಾಗ ಮುಂಬೈ-ಅಹ್ಮದಾಬಾದ್ ನಡುವೆ ಬುಲೆಟ್ ಟ್ರೈನ್ ಯೋಜನೆಗೆ ಹಣ ಹೂಡುವ ಬದಲು ಮುಂಬೈ ಲೋಕಲ್ ರೈಲಿನ ಪರಿಸ್ಥಿತಿ ಸುಧಾರಿಸಲು ಹಣ ಹೂಡಬೇಕಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಚೇಂಜ್ ಆರ್ಗ್ ಮೂಲಕ ಸಲ್ಲಿಸಲಾದ ಈ ದೂರಿನಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ವಿಳಾಸವನ್ನೂ ಬರೆಯಲಾಗಿದೆ. 10 ದಿನಗಳ ಹಿಂದೆ ರೈಲು ಅಪಘಾತದಲ್ಲಿ ತಮ್ಮ ಗೆಳತಿ ಸಾವನ್ನಪ್ಪಿದ ಬಳಿಕ ಚವ್ಹಾಣ್ ಹಾಗೂ ಆಕೆಯ ಗೆಳತಿ ತನ್ವಿ ಮ್ಹಾಪಂಕರ್ ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲು ನಿರ್ಧರಿಸಿದ್ದರು. 10 ದಿನಗಳ ಹಿಂದೆ ಮಿಥಿಬಾ ಕಾಲೇಜಿನ 17 ವರ್ಷದ ವಿದ್ಯಾರ್ಥಿನಿ ಮೈತ್ರಿ ಶಾ ಬೋರಿವಿಲ್ಲಿ ಹಾಗೂ ದಹೀಸರ್ ನಡುವೆ ಸಂಚರಿಸುತ್ತಿದ್ದ ರೈಲಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಕೆಳಗೆ ಬಿದ್ದು ಮೃತಪಟ್ಟಿದ್ದರು. ಎಲ್ಫಿನ್‌ಸ್ಟನ್ ರೋಡ್ ಸ್ಟೇಶನ್‌ನಲ್ಲಿ ಈ ದುರಂತ ಸಂಭವಿಸಿದ ಬಳಿಕ ಚವ್ಹಾಣ್ ಈ ವಿಷಯದ ಬಗ್ಗೆ ಆನ್‌ಲೈನ್ ಮೂಲಕ ದೂರು ದಾಖಲಿಸಲು ನಿರ್ಧರಿಸಿದ್ದರು.