ಮೀಸೆ ಬೆಳೆಸಿದ್ದಕ್ಕಾಗಿ ದಲಿತ ಯುವಕರಿಗೆ ಹಲ್ಲೆ ನಡೆಸಿದ ರಜಪೂತರು: ಓರ್ವನ ಬಂಧನ

Update: 2017-10-01 16:22 GMT

ಅಹ್ಮದಾಬಾದ್, ಅ.1: ಮೀಸೆ ಬೆಳೆಸಿದ್ದಕ್ಕಾಗಿ ದಲಿತ ಯುವಕರ ಮೇಲೆ ರಜಪೂತ ಸಮುದಾಯದ ಸದಸ್ಯರು ಹಲ್ಲೆ ನಡೆಸಿರುವ 2 ಪ್ರತ್ಯೇಕ ಘಟನೆ ಗುಜರಾತ್ ನ ಗಾಂಧಿನಗರದ ಸಮೀಪ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟಂಬರ್ 25 ಹಾಗೂ 29ರಂದು ಕಲೋಲ್ ತಾಲೂಕಿನ ಲಿಂಬೋದರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೆ,29ರಂದು ಕಾನೂನು ವಿದ್ಯಾರ್ಥಿ ಕ್ರುನಲ್ ಮಹೇರಿಯಾ ಎಂಬವರಿಗೆ ಭರತ್ ಸಿಂಗ್ ವಘೇಲ ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಮಹೇರಿಯಾ ಕಲೋಲ್ ತಾಲೂಕು ಪೊಲೀಸರಿಗೆ ದೂರು ನೀಡಿದ್ದು, ಮೀಸೆ ಬೆಳೆಸಿದ್ದಕ್ಕಾಗಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

“ಶುಕ್ರವಾರ ರಾತ್ರಿ ನಾನು ನನ್ನ ಗೆಳೆಯನನ್ನು ಭೇಟಿಯಾಗಿದ್ದೆ. ಅಲ್ಲಿಗೆ ಆಗಮಿಸಿದ ವಘೇಲಾ ಹಾಗು ಇತರರು ನನ್ನನ್ನು ನಿಂದಿಸಿದರು. ಮೀಸೆ ಬೆಳೆಸುವುದರಿಂದ ನಾನು ರಜಪೂತ ಆಗುವುದಿಲ್ಲ ಎಂದು ವಘೇಲಾ ಹೇಳಿದ. ನಾನು ಆತನನ್ನು ನಿರ್ಲಕ್ಷಿಸಿದಾಗ ದೊಣ್ಣೆಯಿಂದ ನನ್ನ ಮೇಲೆ ಹಲ್ಲೆ ನಡೆಸಿದ” ಎಂದು ಮಹೇರಿಯಾ ಆರೋಪಿಸಿದ್ದಾರೆ.

ಈ ದೂರಿನ ಆಧಾರದಲ್ಲಿ ವಘೇಲಾ ವಿರುದ್ಧ ಐಪಿಸಿ ಸೆಕ್ಷನ್ 323ರಡಿ ಎಫ್ ಐಆರ್ ದಾಖಲಿಸಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸೆಪ್ಟಂಬರ್ 25ರಂದು ಇದೇ ರೀತಿಯ ಘಟನೆ ಲಿಂಬೋದರ ಗ್ರಾಮದಲ್ಲಿ ನಡೆದಿತ್ತು. ಪಿಯೂಷ್ ಪರ್ಮಾರ್ ಎಂಬ ದಲಿತ ಯುವಕನಿಗೆ ರಜಪೂತ ಸಮುದಾಯದ ಸದಸ್ಯರು ಹಲ್ಲೆ ನಡೆಸಿದ್ದರು.

“ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಕೆಲ ರಜಪೂತ ಸಮುದಾಯದ ಮಂದಿ ಹಲ್ಲೆ ನಡೆಸಿದ್ದಾಗಿ ಪರ್ಮಾರ್ ಆರೋಪಿಸಿದ್ದಾರೆ. ಮೀಸೆ ಬೆಳೆಸಿದ್ದಕ್ಕಾಗಿ ಅವರು ಹಲ್ಲೆ ನಡೆಸಿದ್ದಾರೆ ಎಂದವರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News