ಖ್ಯಾತಿ, ಹಣ ರಾಜಕೀಯದಲ್ಲಿ ಯಶಸ್ಸು ನೀಡದು: ರಜನಿಕಾಂತ್
ಚೆನ್ನೈ, ಅ. 2: ಸಿನೆಮಾ ಜಗತ್ತಿನಲ್ಲಿ ಗಳಿಸಿದ ಖ್ಯಾತಿ ಹಾಗೂ ಪ್ರಭಾವ ರಾಜಕೀಯದಲ್ಲಿ ಗುರುತು ಮೂಡಿಸಲು ಸಾಕಷ್ಟು ಸಹಾಯವಾಗಲಾರದು ಎಂದು ಹೇಳಿರುವ ಸೂಪರ್ ಸ್ಟಾರ್ ರಜನಿಕಾಂತ್, ತನ್ನ ಸಮಕಾಲೀನ ನಟ ಕಮಲ್ ಹಾಸನ್ ರಿಗೆ ಈ ಬಗ್ಗೆ ಅರಿವಿರುವ ಸಾಧ್ಯತೆ ಇದೆ. ಆದರೆ, ನಾನು ಅವರೊಂದಿಗೆ ಆ ರಹಸ್ಯಗಳನ್ನು ಹಂಚಿಕೊಳ್ಳಲು ಬಯಸಲಾರೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡು ಸರಕಾರ ನಿರ್ಮಿಸಿದ ಪ್ರಸಿದ್ಧ ನಟ ಶಿವಾಜಿ ಗಣೇಶನ್ ಸ್ಮಾರಕದ ಉದ್ಘಾಟನ ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರಲ್ಲಿ ಈ ಇಬ್ಬರು ನಟರು ಕೂಡ ಸೇರಿದ್ದರು. ಭಾರೀ ಜನಪ್ರಿಯರಾಗದ ಹೊರತು ರಾಜಕೀಯದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಕಮಲ್ ಹಾಸನ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಹಿನ್ನೆಲೆಯಲ್ಲಿ ರಜನಿಕಾಂತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿವಾಜಿ ಗಣೇಶನ್ ಸಿನೆಮಾದ ಪಾಠ ಮಾತ್ರ ಕಲಿಸಿಲ್ಲ. ರಾಜಕೀಯ ಪಾಠ ಕೂಡ ಕಲಿಸಿದ್ದಾರೆ. ಅವರು ಸ್ವಂತ ಪಕ್ಷ ಆರಂಭಿಸಿದ್ದರು. ತನ್ನ ಸ್ವಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಹಾಗೂ ಸೋತಿದ್ದರು. ಅದು ಅವರಿಗೆ ಅವಮಾನಕರ ಅಲ್ಲ. ಅದು ಅವರ ಕ್ಷೇತ್ರದ ಜನರಿಗೆ ಆದ ಅವಮಾನ ಎಂದು ರಜನಿಕಾಂತ್ ಹೇಳಿದರು.