ಒಂದು ವಾರ ರಾಷ್ಟ್ರಪಿತನ ಜೊತೆ ಕಳೆದ ಇಬ್ರಾಹಿಂ ಬೊಳ್ಳಾಡಿ

Update: 2017-10-02 05:31 GMT

ಇವರು ಬಿ. ಇಬ್ರಾಹಿಂ ಬೊಳ್ಳಾಡಿ. ವಯಸ್ಸು 95 ಆದರೂ ಲವಲವಿಕೆ, ಉತ್ಸಾಹ ಕುಂದಿಲ್ಲ. ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಬೊಳ್ಳಾಡಿಯಲ್ಲಿ ಮನೆ. ಬಿ. ಇಬ್ರಾಹಿಂ ಅಂತಿಂಥವರಲ್ಲ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜೊತೆ ಹೆಜ್ಜೆಗೆ ಹೆಜ್ಜೆ ಇಟ್ಟವರು. ಹೋರಾಟದಲ್ಲಿ ಸಹಭಾಗಿಯಾದವರು. ಒಂದು ವಾರ ಕಾಲ ಗಾಂಧೀಜಿ ಜೊತೆ ಪಾದಯಾತ್ರೆ ಮಾಡಿದವರು. ಗಾಂಧೀಜಿ ಅವರಿಂದ ಪ್ರೇರಿತರಾಗಿ ಈಗಲೂ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವವರು.

ಗಾಂಧಿ ಜಯಂತಿಯ ಈ ಸಂದರ್ಭದಲ್ಲಿ ಇಬ್ರಾಹಿಂ ಬೊಳ್ಳಾಡಿ ಅವರನ್ನು ಸಂದರ್ಶಿಸುವ, ಅವರ ಜೊತೆ ಒಂದಷ್ಟು ತಾಸು ಕಳೆಯುವ ಅವಕಾಶ ರವಿವಾರ ಮಂಗಳೂರಿನ ಎಂ.ಫ್ರೆಂಡ್ಸ್ ತಂಡಕ್ಕೆ ದೊರಕಿತು.

ನೆರಿಗೆ ಕಟ್ಟಿದ ಮುಖ, ಹಳೆಕಾಲದ ಕನ್ನಡಕ, ಪಚ್ಚೆ ಜುಬ್ಬ, ಬಿಳಿ ಲುಂಗಿ ಉಟ್ಟು ನಮ್ಮನ್ನು ಸ್ವಾಗತಿಸಿದ ವಯೋವೃದ್ಧ ಇಬ್ರಾಹಿಂ ಬೊಳ್ಳಾಡಿ, ನಿಜಕ್ಕೂ ಸ್ಪೂರ್ತಿಯ ಚಿಲುಮೆ. ಈ ಇಳಿವಯಸ್ಸಲ್ಲೂ ನೆನಪಿನ ಬುತ್ತಿ ಬಿಚ್ಚಿಟ್ಟರು. ಒಂಚೂರೂ ಜ್ಞಾಪಕ ಶಕ್ತಿ ಮಾಸಿಲ್ಲ. ದಿನನಿತ್ಯ 4 ಕಿಲೋಮೀಟರ್ ಬೆಟ್ಟಗುಡ್ಡ ಹತ್ತಿ ನಡೀತಾರೆ. ಕುಂಬ್ರ ಪೇಟೆಗೆ ತೆರಳಿ ಎಲ್ಲರನ್ನೂ ಮಾತಾಡಿಸ್ತಾರೆ. ಕುಂಬ್ರ ಕೆಐಸಿ ಸಂಸ್ಥೆಯ ಮಕ್ಕಳೊಂದಿಗೆ ಬೆರೆಯುತ್ತಾರೆ. 50 ವರ್ಷಗಳಿಂದ ಹೊಗೆಸೊಪ್ಪು ವೀಳ್ಯದೆಲೆ ಜಗಿಯುತ್ತಿದ್ದರೂ ಆರೋಗ್ಯದಲ್ಲಿ ಏರುಪೇರಾಗಿಲ್ಲ. ಕಳೆದ ಒಂದು ವರ್ಷದಿಂದ ಕಾಲಿನ ಮಂಡಿನೋವು, ತಲೆಯ ಸ್ನಾಯು ಸೆಳೆತವಿದ್ದರೂ ದಿನನಿತ್ಯ ನಡೆದಾಡುವುದನ್ನು ಬಿಟ್ಟಿಲ್ಲ. ಕಳೆದ ಮೂರು ದಿನಗಳಿಂದ ಕಾಲು ಸ್ನಾಯು ಸೆಳೆತದಿಂದ ಪೇಟೆ ಕಡೆ ಹೋಗಿಲ್ಲ ಎನ್ನುತ್ತಾರೆ ಇಬ್ರಾಹಿಂ.

1934 ರಲ್ಲಿ ಮಹಾತ್ಮಾ ಗಾಂಧೀಜಿ ನಮ್ಮ ಕರಾವಳಿಯಲ್ಲಿ ಓಡಾಡಿದ್ದರು. ಆವಾಗ ನಮ್ಮದು ಮದ್ರಾಸ್ ಪ್ರಾಂತ್ಯ. ಗಾಂಧೀಜಿ ಮಡಿಕೇರಿ, ಸಂಪಾಜೆ, ಸುಳ್ಯ, ಕುಂಬ್ರ, ಪುತ್ತೂರು, ಉಪ್ಪಿನಂಗಡಿ, ಮಂಗಳೂರು ಮೊದಲಾದೆಡೆ ಪಾದಯಾತ್ರೆ ನಡೆಸಿ ಅಸ್ಪ್ರಶ್ಯತೆ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದರು. ಗಾಂಧೀಜಿ ಬಂದಾಗ ಅವರನ್ನು ಸ್ವಾಗತಿಸಿದ, ಪಾದಯಾತ್ರೆಯಲ್ಲಿ ಪಾಲ್ಗೊಂಡ ಹಲವರು ಇತಿಹಾಸದ ಪುಟ ಸೇರಿದ್ದಾರೆ. ಗಾಂಧೀಜಿ ಪುತ್ತೂರಿಗೆ ಬಂದ ಸಂದರ್ಭ 15 ರ ಹರೆಯದ ಯುವಕನಾಗಿದ್ದ ಇಬ್ರಾಹಿಂ ಬೊಳ್ಳಾಡಿ ಅವರ ಜೊತೆ ಒಂದು ವಾರ ಕಾಲ ಪಾದಯಾತ್ರೆ ನಡೆಸಿ ಗಾಂಧೀಜಿಗೆ ಸಾಥ್ ನೀಡಿದ್ದಾರೆ. ಆ ಅವಿಸ್ಮರಣೀಯ ನೆನಪಿನೊಂದಿಗೆ ಇಬ್ರಾಹಿಂ ಈಗಲೂ ಜೀವಿಸುತ್ತಿದ್ದಾರೆ. ಈಗ ಅವರು 95 ರ ಹರೆಯ.

"ಗಾಂಧೀಜಿ ಜೊತೆ ಪಾದಯಾತ್ರೆ ಮಾಡಲು ನನಗೆ ಸ್ಪೂರ್ತಿ ನೀಡಿದವರು ಕುಂಬ್ರ ಜತ್ತಪ್ಪ ರೈ. ಆವಾಗ ನನಗೆ ಮಕ್ಕಳಾಟಿಕೆ. ಸ್ವಾತಂತ್ರ್ಯದ ಗಂಭೀರತೆ ಗೊತ್ತಿರಲಿಲ್ಲ. ಮನೆಯಲ್ಲಿ ತಂದೆ ಬೈಯ್ಯುತ್ತಿದ್ದರು. ಪಾದಯಾತ್ರೆಯುದ್ದಕ್ಕೂ ಅಲ್ಲಲ್ಲಿ ಜನ ಸೇರಿಸಿ ಗಾಂಧೀಜಿಯವರು ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರು. ಅದನ್ನು ಕನ್ನಡಕ್ಕೆ ಭಾಷಾಂತರಿಸಲಾಗುತ್ತಿತ್ತು. ನಾವು ಮಹಾತ್ಮಾ ಗಾಂಧೀಜಿ ಕೀ ಜೈ ಎಂಬ ಘೋಷಣೆ ಕೂಗುತ್ತಿದ್ದೆವು. ನಾವು ನೂರಾರು ಮಂದಿ ಪಾದಯಾತ್ರೆಯಲ್ಲಿರುತ್ತಿದ್ದೆವು. ಗಾಂಧೀಜಿಯವರು ನನ್ನ ತಲೆಗೆ ಕೈ ಇಟ್ಟು ಮೈ ನೇವರಿಸಿದ್ದು ಈಗಲೂ ರೋಮಾಂಚನವಾಗುತ್ತಿದೆ. ಅವರ ಹೋರಾಟದ ಕಿಚ್ಚಿಗೆ ನಾವು ಮನ ಸೋತಿದ್ದೆವು. ಪಾದಯಾತ್ರೆ ದಿನವೊಂದಕ್ಕೆ ಹತ್ತು ಮೈಲಿಯಷ್ಟು ಸಾಗುತ್ತಿತ್ತು. ನಂತರ ಸಿಕ್ಕಿದಲ್ಲಿ ಮಲಗುವುದು. ಪುನಃ ಬೆಳಗೆದ್ದು ಹೊರಡುವುದು. ಹಲವು ಮಂದಿ ಗಾಂಧೀಜಿಯವರನ್ನು ಸ್ವಾಗತಿಸಿ ಸಜ್ಜಿಗೆ, ಅವಲಕ್ಕಿ ನೀಡುತ್ತಿದ್ದರು. ಅದರಲ್ಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಆವಾಗ ನೀರಿಗಾಗಿ ಜನ ಪರದಾಡುತ್ತಿದ್ದರು. ಕೆಲವೊಮ್ಮೆ ಆಹಾರ ಇಲ್ಲದೆ ಉಪವಾಸದಲ್ಲೇ ಪಾದಯಾತ್ರೆ ಮಾಡಿದ್ದಿದೆ" ಎನ್ನುತ್ತ ಇಬ್ರಾಹಿಂ ಬೊಳ್ಳಾಡಿ ತಮ್ಮ ನೆನಪಿನ ಬುತ್ತಿ ಬಿಚ್ಚಿದರು.

"ಆ ಕಾಲದಲ್ಲಿ ಮನೆಯಲ್ಲಿ ಗಂಜಿ ಕಾಣುವುದೇ ಅಪರೂಪ. ಬೇಸಿಗೆಯಲ್ಲಿ ರಾಗಿ ಅಂಬಲಿ ಮಾಡಿಟ್ಟರೆ ಮಳೆಗಾಲದಲ್ಲಿ ಅದನ್ನು ತಿನ್ನುತ್ತಿದ್ದೆವು. ಕಾಡಿಗೆ ಹೋಗಿ ತವರೆ ಸೊಪ್ಪು, ನೋಕಟೆ ಕಾಯಿ, ಹಲಸಿನ ಸಿಪ್ಪು ಮೊದಲಾದವನ್ನು ತಂದು ಬೇಯಿಸಿ ತಿನ್ನುತ್ತಿದ್ದೆವು" ಎನ್ನುತ್ತಾರೆ ಇಬ್ರಾಹಿಂ.

ಇಬ್ರಾಹಿಂ ಬೊಳ್ಳಾಡಿ 6 ನೇ ತರಗತಿ ತನಕ ಕಲಿತರೂ ಡಿಗ್ರಿ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಜ್ಞಾನವಿದೆ. ಅವರ ಅಕ್ಷರ ಈಗಲೂ ಬಹಳ ಸುಂದರ ಹಾಗೂ ಸ್ಪುಟ. ಬರೆಯುವಾಗ ಕೈ ನಡುಗುವುದಿಲ್ಲ. ಅಂದು ಊರಲ್ಲಿ ಮುಸ್ಲಿಂ ಸಮುದಾಯದಲ್ಲಿ ವಿದ್ಯಾವಂತರಾಗಿದ್ದವರು ಬಿ. ಇಬ್ರಾಹಿಂ ಮತ್ತು ಅವರ ಸ್ನೇಹಿತರಾದ ದಿವಂಗತ ಶೇಖಮಲೆ ಮಮ್ಮುಂಞಿ ಹಾಜಿಯವರು. ಪತ್ರ ಬರೆಯಬೇಕಾದರೆ ಊರವರು ಅವರ ಬಳಿ ತೆರಳುತ್ತಿದ್ದರಂತೆ.

ಅಂದು 6ನೇ ತರಗತಿ ಕಲಿತ ಬಳಿಕ 15ನೇ ವಯಸ್ಸಿನಲ್ಲೇ ಸ್ವಾತಂತ್ರ್ಯದ ಹೋರಾಟಕ್ಕೆ ಹೋಗಬೇಕೆಂಬ ಬಯಕೆ ಹೊಂದಿ ಗಾಂಧೀಜಿ ಜೊತೆ ಪಾದಯಾತ್ರೆ ಕೈಗೊಂಡವರು ಇಬ್ರಾಹಿಂ. ಸ್ವಾತಂತ್ರ್ಯದ ಮೊದಲು ಹಾಗೂ ತರುವಾಯ ಕೂಡಾ ಇಬ್ರಾಹಿಂ ದೆಹಲಿಗೆ ತೆರಳಿ ಮಹಾತ್ಮಾ ಗಾಂಧೀಜಿಯವರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಗಾಂಧೀಜಿ ನಿಧನದ ಬಳಿಕ ರಾಜ್ ಘಾಟ್ ನಲ್ಲಿರುವ ಗಾಂಧಿ ಸಮಾಧಿಗೆ ಭೇಟಿ ನೀಡಿದ್ದಾರೆ.

ಅಷ್ಟೇ ಅಲ್ಲ. ಇಬ್ರಾಹಿಂ ಅವರು ಕುಂಬ್ರದ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿದ್ದಾರೆ. ಕುಂಬ್ರದಲ್ಲಿ ಸಹಕಾರಿ ಸಂಘ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಅದರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರಾರಂಭದಲ್ಲಿ ಮನೆ ಮನೆಗೆ ಭೇಟಿ ನೀಡಿ 102 ಸದಸ್ಯರನ್ನು ಮಾಡಿ ಸಹಕಾರಿ ಸಂಘದ ದಾಖಲೆ ಪತ್ರಗಳನ್ನು ಸರಿಪಡಿಸಿದವರು ಇಬ್ರಾಹಿಂ.

ಇಂದು ಆ ಸಹಕಾರಿ ಸಂಘ ಹೆಮ್ಮರವಾಗಿ ಬೆಳೆದು ಕೋಟ್ಯಾಂತರ ರೂ. ವ್ಯವಹಾರ ಮಾಡುತ್ತಿದೆ. ಕುಂಬ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಸ್ಥಾಪನೆಯ ಸಂದರ್ಭದಲ್ಲಿ ಹಲವು ಪ್ರತಿರೋಧವನ್ನು ಎದುರಿಸಿದವರು ಇಬ್ರಾಹಿಂ. ಹೀಗೇ ಕುಂಬ್ರದ ಸಹಕಾರಿ ಹಾಗೂ ಶಿಕ್ಷಣದ ಹರಿಕಾರರಾಗಿದ್ದಾರೆ. ಈ ಇಳಿ ವಯಸ್ಸಲ್ಲೂ ಊರ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ನಾಡಿನ ಏಳಿಗೆಗಾಗಿ 95 ರ ಹರೆಯದಲ್ಲೂ ಮಿಡಿಯುವ ಹೃದಯ ಬಿ. ಇಬ್ರಾಹಿಂ ಅವರದ್ದು.

ಪುತ್ತೂರು ಒಳಮೊಗ್ರು ಗ್ರಾಮದ ಕುಂಬ್ರ ಬೊಳ್ಳಾಡಿಯ ಅಬ್ಬಕುಂಞಿ ಹಾಗೂ ಆಸ್ಯಮ್ಮ ದಂಪತಿಯ ಪುತ್ರರಾಗಿರುವ ಇಬ್ರಾಹಿಂ ಅವರಿಗೆ 4 ಪುತ್ರರು ಹಾಗೂ ಇಬ್ಬರು ಪುತ್ರಿಯರು ಸೇರಿ ಆರು ಮಕ್ಕಳು. ಪ್ರಸ್ತುತ ಇಬ್ರಾಹಿಂ ತನ್ನ ಮೂಲ ಮನೆಯ ಹತ್ತಿರವಿರುವ ಪುತ್ರ ಅಬ್ಬಾಸ್ ಅವರ ಮನೆಯಲ್ಲಿದ್ದಾರೆ. ಎರಡೂ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇಬ್ರಾಹಿಂ ಅವರಿಗೆ ದೇವರು ಆಯುರಾರೋಗ್ಯ ನೀಡಲೆಂಬುದು ಹಾರೈಕೆ.

ಬೊಳ್ಳಾಡಿಯಲ್ಲಿರುವ ಇಬ್ರಾಹಿಂ ಅವರ ಮೂಲಮನೆ

Full View Full View Full View

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News