×
Ad

ಸಿರಿಯ ಕದನ: ಸೆಪ್ಟೆಂಬರ್‌ನಲ್ಲಿ 3 ಸಾವಿರ ಬಲಿ

Update: 2017-10-01 23:17 IST

ಬೈರೂತ್,ಅ.1: ಅಂತರ್ಯುದ್ಧದಿಂದ ಜರ್ಝರಿತವಾಗಿರುವ ಸಿರಿಯದಲ್ಲಿ ಈ ವರ್ಷದ ಸೆಪ್ಟೆಂಬರ್ ತಿಂಗಳೊಂದರಲ್ಲೇ 955 ನಾಗರಿಕರು ಸೇರಿದಂತೆ ಕನಿಷ್ಠ 3 ಸಾವಿರ ಮಂದಿ ಮೃತಪಟ್ಟಿರುವುದಾಗಿ ಸಿರಿಯದ ಮಾನವಹಕ್ಕುಗಳ ಕಣ್ಗಾವಲು ಕೇಂದ್ರವು ರವಿವಾರ ಬಹಿರಂಗಪಡಿಸಿದೆ. ‘‘ ಸೆಪ್ಟೆಂಬರ್‌ನಲ್ಲಿ ಹತರಾದ ನಾಗರಿಕರ ಪೈಕಿ ಶೇ.70ರಷ್ಟು ಮಂದಿ ಐಸಿಸ್ ವಿರುದ್ಧ ಕಾದಾಡುತ್ತಿರುವ ಸರಕಾರಿ ಸೇನೆಯಿಂದ ಹಾಗೂ ರಶ್ಯದ ವಾಯುದಾಳಿ ಅಥವಾ ಅಂತಾರಾಷ್ಟ್ರೀಯ ಮಿತ್ರಪಡೆಗಳ ದಾಳಿಯಿಂದ ಪ್ರಾಣಕಳೆದುಕೊಂಡಿದ್ದಾರೆ’’ ಎಂದು ಬ್ರಿಟನ್‌ನಿಂದ ಕಾರ್ಯಾಚರಿಸುತ್ತಿರುವ ಮಾನವಹಕ್ಕು ಕಣ್ಗಾವಲು ಕೇಂದ್ರದ ಅಧ್ಯಕ್ಷ ರಾಮಿ ಅಬ್ದೆಲ್ ರಹಮಾನ್ ತಿಳಿಸಿದ್ದಾರೆ.

ಕದನವು ಉಲ್ಬಣಗೊಂಡಿರುವುದರ ಪರಿಣಾಮವಾಗಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮೃತರಾದವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆಯೆಂದು ಅವರು ಹೇಳಿದ್ದಾರೆ.

‘‘ ಸಿರಿಯದ ಉತ್ತರ ಹಾಗೂ ಪೂರ್ವಭಾಗದಲ್ಲಿರುವ ಐಸಿಸ್ ಭದ್ರಕೋಟೆಗಳ ಮೇಲೆ ಅಂತಾರಾಷ್ಟ್ರೀಯ ಮಿತ್ರಪಡೆಗಳು ಹಾಗೂ ರಶ್ಯ ಮತ್ತು ಸಿರಿಯ ಆಡಳಿತವು ತಮ್ಮ ವಾಯುದಾಳಿಗಳನ್ನು ತೀವ್ರಗೊಳಿಸಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ’’ ಎಂದು ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ.

 ಕಳೆದ ಎರಡು ವಾರಗಳಲ್ಲಿ ರಶ್ಯ ಹಾಗೂ ಸಿರಿಯ ಸೇನೆಯ ಯುದ್ಧವಿಮಾನಗಳು ಅಲ್‌ಖಾಯ್ದದ ಮಾಜಿ ಬೆಂಬಲಿಗ ಗುಂಪು ‘ಎಚ್‌ಟಿಎಸ್’ನ ನಿಯಂತ್ರಣದಲ್ಲಿರುವ ವಾಯವ್ಯ ಇದ್ಲಿಬ್ ಪ್ರಾಂತದಲ್ಲಿ ತಮ್ಮ ವಾಯುದಾಳಿಗಳನ್ನು ಅಧಿಕಗೊಳಿಸಿದ್ದವು.

ಸೆಪ್ಟೆಂಬರ್‌ನಲ್ಲಿ ಮೃತಪಟ್ಟ 955 ನಾಗರಿಕರ ಪೈಕಿ 207 ಮಂದಿ ಮಕ್ಕಳೆಂದು ಕಣ್ಗಾವಲು ಕೇಂದ್ರವು ತಿಳಿಸಿದೆ.

ಬಂಡುಕೋರರು ಹಾಗೂ ಸಿರಿಯ ಆಡಳಿತದ ಮಧ್ಯೆ 2011ರಿಂದ ಭುಗಿಲೆದ್ದಿರುವ ಸಂಘರ್ಷಕ್ಕೆ ಈವರೆಗೆ 3.30 ಲಕ್ಷ ಮಂದಿ ಬಲಿಯಾಗಿದ್ದಾರೆ ಹಾಗೂ ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News