ವಿಭಿನ್ನ ಮಾರ್ಗಗಳಲ್ಲಿ ಸರಕಾರಗಳು

Update: 2017-10-01 18:14 GMT

ಮಾನ್ಯರೆ, 

ಗೋಹತ್ಯೆ ನಿಷೇಧ - ಅಯೋಧ್ಯೆ ರಾಮ ಮಂದಿರ ನಿರ್ಮಾಣ - ತ್ರಿವಳಿ ತಲಾಖ್ ನಿಷೇಧ - ರೊಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನಿರಾಕರಣೆ ಮುಂತಾದ ಕ್ರಮಗಳ ಮೂಲಕ ಧಾರ್ಮಿಕ ನೆಲೆಯಲ್ಲಿ ತಮ್ಮ ವೋಟೆಂಬ ಮೀನಿಗೆ ಗಾಳ ಹಾಕುತ್ತಿರುವ ಕೇಂದ್ರದ ಆಡಳಿತ ಪಕ್ಷ ಜಾತಿ ಜನಗಣತಿ - ಶಾದಿ ಭಾಗ್ಯ - ಅಹಿಂದ ಓಲೈಕೆ - ಬಸವ ಅನುಯಾಯಿಗಳ ನಡುವಿನ ಸಂಘರ್ಷ ಮುಂತಾದ ನೆಲೆಯಲ್ಲಿ ಜಾತಿ ಆಧಾರಿತ ವೋಟು ಬ್ಯಾಂಕಿಗೆ ಕೈ ಹಾಕುತ್ತಿರುವ ರಾಜ್ಯದ ಆಡಳಿತ ಪಕ್ಷ. ಈ ಎರಡೂ ವಿಭಿನ್ನ ದಾರಿಯಲ್ಲಿ ಸಾಗುತ್ತಿರುವ ಇವರಿಂದ ನಿಜವಾಗಲೂ ರಾಜ್ಯ ಮತ್ತು ದೇಶದ ಅಭಿವೃದ್ಧಿ ಸಾಧ್ಯವೇ?

ದಿನೇ ದಿನೇ ವಿಷಯಕ್ತ ಗಾಳಿ ನೀರು ಆಹಾರ ಸೇವಿಸುತ್ತಾ ದೈಹಿಕವಾಗಿ ಮತ್ತು ಮಾನಸಿಕವಾಗಿ ನೆಮ್ಮದಿಯ ಹುಡುಕಾಟ ದಲ್ಲಿ ದಿನ ದೂಡುತ್ತಿರುವ 125 ಕೋಟಿ ಜನರಿದ್ದರೂ ಅಂತಾರಾಷ್ಟ್ರೀಯವಾಗಿ ಹೆಚ್ಚಿನ ಸಾಧನೆ ಮಾಡದ ಸಾಮಾಜಿಕ ಆರ್ಥಿಕ ಅಸಮಾನತೆಯ ಕಾರಣಕ್ಕಾಗಿ ಬಹುತೇಕ ಸಮಾಜ ಅಸಹನೆ ಅಸಹಿಷ್ಣುತೆ ಕಡೆ ಸಾಗುತ್ತಿರುವಾಗ ಇದನ್ನೆಲ್ಲಾ ನಿಭಾಯಿಸಿ ನೈಜ ಅಭಿವೃದ್ಧಿ ಈ ಸರಕಾರಗಳಿಂದ ಸಾಧ್ಯವೇ?

ಹೌದು, ಆಯಾ ಪಕ್ಷಗಳ ನಾಯಕರ ಅಭಿಮಾನಿಗಳು ಮತ್ತು ಭಕ್ತರು ನಮ್ಮಿಂದ ಸಾಧ್ಯ ಎನ್ನುತ್ತಾರೆ. ಒಬ್ಬ ಸಾಮಾನ್ಯ ಪ್ರಜೆಯಾಗಿ ನಮಗೆ ಅನಿಸುವುದೇನು?

ಒಂದು ನಾಗರಿಕ ಪ್ರಜ್ಞೆಯ, ಕನಿಷ್ಠ ಮೂಲಭೂತ ಸೌಕರ್ಯ ಗಳನ್ನು ಹೊಂದಿದ, ಕಡಿಮೆ ಅಸಮಾನತೆಯ, ಒಂದಷ್ಟು ಭದ್ರತೆಯ, ಸಾಕಷ್ಟು ಕ್ರಿಯಾತ್ಮಕ ಚಟುವಟಿಕೆಯ ಸ್ವಸ್ಥ ಸಮಾಜ ನಿರ್ಮಾಣ ಈಗಿನ ಎರಡೂ ಸಾಂಪ್ರದಾಯಿಕ ಪಕ್ಷಗಳ ಮತ್ತು ನಾಯಕರಿಂದ ಖಂಡಿತ ಸಾಧ್ಯವಿಲ್ಲ.

ಇಡೀ ರಾಜ್ಯ ರಾಷ್ಟ್ರವನ್ನು ಸಮಗ್ರ ದೃಷ್ಟಿಯಿಂದ ನೋಡದೆ ಜಾತಿ ಮತ್ತು ಧರ್ಮದ ಕಣ್ಣುಗಳಲ್ಲಿ ನೋಡುತ್ತಿದ್ದಾರೆ. ಭಾಷಣಗಳಲ್ಲಿ ಮಾತ್ರ ಮೇಲ್ನೋಟಕ್ಕೆ ಶಾಂತಿ ಸೌಹಾರ್ದ ಸಮಾನತೆಯ ಮುಖವಾಡ ಧರಿಸುವ ಇವರು ಆಂತರ್ಯದಲ್ಲಿ ಒಂದು ವರ್ಗಗಳನ್ನು ಮಾತ್ರ ಓಲೈಸಿ ಚುನಾವಣೆಗಳಲ್ಲಿ ಅವರ ಮತಗಳಿಸಿ ಮತ್ತೆ ಅಧಿಕಾರ ಹಿಡಿಯುವ ದುರಾಸೆ ಬಿಟ್ಟರೆ,ಜನರನ್ನು - ರಾಜ್ಯ ದೇಶವನ್ನು ಸಮಷ್ಟಿ ಪ್ರಜ್ಞೆಯಿಂದ ಪರಿಶೀಲಿಸಿ ಅತ್ಯಂತ ಸಂವೇದನೆಯಿಂದ ಅಭಿವೃದ್ಧಿ ಸಾಧಿಸುವ ಯಾವ ಉತ್ಕಟತೆಯೂ ಅವರಲ್ಲಿ ಕಾಣುತ್ತಿಲ್ಲ.ಆ ಕಾರಣಕ್ಕಾಗಿಯೇ ಸಾಮಾನ್ಯ ಜನರಿಗೆ ರಾಜಕೀಯ ಎಂಬ ಪದವೇ ಕುಟಿಲತೆಯ, ಸ್ವಾರ್ಥದ, ಅಧಿಕಾರ ದಾಹದ ಪರ್ಯಾಯ ಪದ ಎಂಬಂತಾಗಿದೆ.

ಇದು ಸಂಪೂರ್ಣ ಇಲ್ಲವಾಗಿ ಹೊಸ ರಾಜಕೀಯ ಪ್ರಜ್ಞೆ ಸಾಮಾನ್ಯರಲ್ಲಿ ಮೂಡುವವರೆಗೂ ಅಭಿವೃದ್ಧಿ ಕೇವಲ ಕನಸು ಮಾತ್ರ. ಅಲ್ಲಿಯವರೆಗೂ ಅಕ್ಷರಗಳ ಮುಖಾಂತರ ಎಲ್ಲಾ ವರ್ಗದ ಎಲ್ಲಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಾವೆಲ್ಲಾ ಮಾಡುತ್ತಿರೋಣ..

-ವಿವೇಕಾನಂದ. ಎಚ್.ಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News