ಬಿಹಾರ: ಮೊಹರ್ರಂ ಮೆರವಣಿಗೆಯಲ್ಲಿ ಭಾರೀ ದುರಂತ
ಭಾಗಲ್ಪುರ,ಅ.2: ಭಾಗಲ್ಪುರ ಜಿಲ್ಲೆಯ ಎರಡು ಗ್ರಾಮಗಳಲ್ಲಿ ರವಿವಾರ ಸಂಜೆ ಸಂಭವಿಸಿದ ಎರಡು ಪ್ರತ್ಯೇಕ ದುರಂತ ಘಟನೆಗಳಲ್ಲಿ ಮೊಹರ್ರಂ ಮೆರವಣಿಗೆ ಸಂದರ್ಭತಾಝಿಯಾಗಳು ತಗುಲಿ ಅಧಿಕ ಸಾಮರ್ಥ್ಯದ ವಿದ್ಯುತ್ ತಂತಿಗಳು ಹರಿದು ಬಿದ್ದ ಪರಿಣಾಮವಾಗಿ ನಾಲ್ವರು ವಿದ್ಯುದಾಘಾತದಿಂದ ಮೃತಪಟ್ಟಿದ್ದು, ಇತರ 27 ಜನರು ಗಾಯಗೊಂಡಿದ್ದಾರೆ.
ಭಾಗಲ್ಪುರದ ಹೊರವಲಯದ ಲೋಧಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಚಿಪುರ ಗ್ರಾಮದಲ್ಲಿ ಸಂಭವಿಸಿದ ಮೊದಲ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ 20 ಜನರು ಗಾಯಗೊಂಡಿದ್ದರೆ, ಜಿಲ್ಲೆಯ ನೌಗಾಚಿಯಾ ಉಪವಿಭಾಗದ ಮಿಲ್ಕಿ ಗ್ರಾಮದಲ್ಲಿ ಸಂಭವಿಸಿದ ಎರಡನೇ ಘಟನೆಯಲ್ಲಿ ಇನ್ನಿಬ್ಬರು ಮೃತಪಟ್ಟು ಏಳು ಜನರು ಗಾಯ ಗೊಂಡಿದ್ದಾರೆ. ಎಲ್ಲ ಗಾಯಾಳುಗಳನ್ನು ಭಾಗಲ್ಪುರದ ಜೆ.ಎನ್.ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಎಂಟು ಜನರಿಗೆ ತೀವ್ರ ಸುಟ್ಟಗಾಯಗಳಾಗಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ವಿದ್ಯುತ್ ಇಲಾಖೆಯ ಸಿಬ್ಬಂದಿಗಳ ‘ಕ್ರಿಮಿನಲ್ ನಿರ್ಲಕ್ಷ’ ಮಚಿಪುರ ಗ್ರಾಮದಲ್ಲಿ ನಡೆದ ದುರಂತಕ್ಕೆ ಕಾರಣವಾಗಿದ್ದು, ಪವರ್ ಸಬ್‌ಸ್ಟೇಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರನ್ನು ತಡರಾತ್ರಿ ಬಂಧಿಸಲಾಗಿದೆ ಎಂದು ಭಾಗಲ್ಪುರ ಎಸ್‌ಎಸ್‌ಪಿ ಮನೋಜ ಕುಮಾರ್ ತಿಳಿಸಿದರು.
ಮಿಲ್ಕಿ ಗ್ರಾಮದಲ್ಲಿ ಘಟನೆಗೆ ಕಾರಣರಾದ ವಿದ್ಯುತ್ ಇಲಾಖೆಯ ನೌಕರರು ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎರಡೂ ಘಟನೆ ಗಳಲ್ಲಿ ಮೊಹರ್ರಂ ಮೆರವಣಿಗೆ ಸಂದರ್ಭ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸುವಂತೆ ಮೇಲಧಿಕಾರಿಗಳ ಸೂಚನೆಗಳನ್ನು ಸಿಬ್ಬಂದಿಗಳು ನಿರ್ಲಕ್ಷಿಸಿದ್ದರು ಎಂದು ಪೊಲೀಸರು ತಿಳಿಸಿದರು.
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ.ಪರಿಹಾರವನ್ನು ವಿದ್ಯುತ್ ಇಲಾಖೆಯು ಪ್ರಕಟಿಸಿದೆ ಎಂದು ಮೂಲಗಳು ತಿಳಿಸಿವೆ.