ದೇಶದ ‘ಅತ್ಯಂತ ಕೊಳಕು ನಗರ’ ಗೊಂಡಾದಲ್ಲಿ ಸ್ಥಳೀಯರ ಬದುಕು ನರಕಯಾತನೆ
ಲಕ್ನೊ, ಅ.2: ಒಂದೆಡೆ ರಾಶಿಬಿದ್ದಿರುವ ಮಲಮೂತ್ರದ ಗುಡ್ಡೆಯ ಮೇಲೆ ಹಾರುತ್ತಿರುವ ನೊಣಗಳು, ಕೊಳಚೆ ನೀರು ಉಕ್ಕೇರಿ ಹರಿಯುತ್ತಿರುವ ಚರಂಡಿ, ಇದರಿಂದ ಹೊರಹೊಮ್ಮುತ್ತಿರುವ ಅಸಹ್ಯ ದುರ್ವಾಸನೆ- ಇದು ದೇಶದ ಅತ್ಯಂತ ಕೊಳಕು ನಗರ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಉತ್ತರಪ್ರದೇಶದ ಗೊಂಡಾ ನಗರದಲ್ಲಿರುವ ‘ಅವಾಸ್ ವಿಕಾಸ್ ’ ಎಂಬ ಪ್ರದೇಶದಲ್ಲಿ ಕಾಣುವ ದೃಶ್ಯ.
ಗೊಂಡ ನಗರ ಉ.ಪ್ರದೇಶದ ರಾಜಧಾನಿ ಲಕ್ನೊಗಿಂತ ಸುಮಾರು 125 ಕಿ.ಮೀ. ದೂರದಲ್ಲಿದೆ. ನೇಪಾಳಕ್ಕೆ ಪ್ರಯಾಣಿಸುವವರಿಗೆ ಈ ನಗರ ಶಾಂತವಾದ ವಿಶ್ರಾಂತಿತಾಣ ಎನಿಸಿಕೊಂಡಿದೆ. ಆದರೆ ಈ ವರ್ಷದ ಮೇ ತಿಂಗಳಲ್ಲಿ ಕೇಂದ್ರ ಸರಕಾರ 434 ನಗರಗಳಲ್ಲಿ ನಡೆಸಿದ ಸ್ವಚ್ಛತಾ ಸಮೀಕ್ಷೆಯಲ್ಲಿ ಗೊಂಡ ನಗರ ಕಟ್ಟಕಡೆಯ ಸ್ಥಾನ ಪಡೆಯಿತು. ಶೌಚಾಲಯದ ಬಳಕೆ, ತ್ಯಾಜ್ಯ ಸಂಗ್ರಹಣೆ, ನಾಗರಿಕ ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಕ್ಷೇತ್ರಗಳನ್ನು ಸಮೀಕ್ಷೆಯ ಸಂದರ್ಭ ಪರಿಗಣಿಸಲಾಗಿತ್ತು.
ಗೊಂಡ ನಗರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಅಥವಾ ವಾಹನ ಸವಾರರಿಗೆ ರಸ್ತೆಯಲ್ಲಿ ಎದುರಾಗುವ ಪ್ಲಾಸ್ಟಿಕ್ ಬಾಟಲಿಗಳ ರಾಶಿ, ಬಳಸಿ ಎಸೆಯಲಾದ ಖಾದ್ಯಪದಾರ್ಥಗಳ ಪೆಟ್ಟಿಗೆಗಳು, ಪ್ರಾಣಿಗಳ ಮಲಮೂತ್ರದ ರಾಶಿ ಇತ್ಯಾದಿಗಳನ್ನು ತಪ್ಪಿಸಿಕೊಂಡು ಮುಂದೆ ಸಾಗುವುದೇ ಒಂದು ದೊಡ್ಡ ಸಾಹಸವಾಗಿದೆ.
ಹೊಲಸು ಮತ್ತು ದುರ್ನಾತದಿಂದಾಗಿ ನಮಗೆ ದೇಶದಾದ್ಯಂತ ಕುಖ್ಯಾತಿ ದೊರಕಿದೆ . ನೊಣ, ಸೊಳ್ಳೆಗಳ ಹಾವಳಿಯಿಂದ ಇಲ್ಲಿ ಬದುಕುವುದೇ ನರಕಯಾತನೆಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ. ನಾವು ದೇಶದ ಅತ್ಯಂತ ಕೊಳಕು ನಗರದ ನಿವಾಸಿಗಳೆಂದು ಪರಿಗಣಿಸಲ್ಪಟ್ಟಿದ್ದೇವೆ. ಇದೊಂದು ನಿಜಕ್ಕೂ ಜಿಗುಪ್ಸೆ ಹುಟ್ಟಿಸುವ ವಿಷಯವಾಗಿದೆ.ಈ ನಗರದ ಸುತ್ತ ಒಮ್ಮೆ ಕಣ್ಣಾಡಿಸಿ ನೋಡಿದರೆ ಇದು ಸರಿಯಾದ ಸಮೀಕ್ಷೆ ಎಂದು ಯಾರಿಗೂ ಅನ್ನಿಸದಿರದು. ನಾವು ಇಲ್ಲಿ ಹೇಗೆ ಬದುಕುತ್ತಿದ್ದೇವೆ ಎಂಬುದನ್ನು ಇತರರು ಊಹಿಸಲೂ ಸಾಧ್ಯವಿಲ್ಲ ಎಂದು ಸ್ಥಳೀಯ ವ್ಯಕ್ತಿ ದುರ್ಗೇಶ್ ಮಿಶ್ರ ಪ್ರತಿಕ್ರಿಯಿಸಿದ್ದಾರೆ.
ಕಳೆದ 10 ವರ್ಷದಿಂದ ಸೂಕ್ತ ಯೋಜನೆಯಿಲ್ಲದೆ ನಡೆದ ಅಭಿವೃದ್ಧಿಕಾರ್ಯದಿಂದ ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಕರ್ಯದ ಕೊರತೆಯಾಗಿದೆ ಎಂದು ಸ್ಥಳೀಯ ವ್ಯಾಪಾರಿ ರಾಜೀವ್ ರಸ್ತೋಗಿ ಅಭಿಪ್ರಾಯಪಟ್ಟಿದ್ದಾರೆ. ನಾಗರಿಕರ ನಿರಾಸಕ್ತಿ ಹಾಗೂ ಭ್ರಷ್ಟಾಚಾರದಿಂದಾಗಿ ಕೊಳಕು ನಗರ ಎಂಬ ಹಣೆಪಟ್ಟಿ ಸಿಕ್ಕಿದೆ. ರಾಜಕಾರಣಿಗಳಿಗೆ ಮಾನಮರ್ಯಾದೆ ಇದ್ದರೆ ಇನ್ನಾದರೂ ಕೊಳಕು ನಗರವನ್ನು ಸ್ವಚ್ಛ ನಗರವನ್ನಾಗಿಸಲು ಕಾರ್ಯೋನ್ಮುಖರಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.