×
Ad

ಪೆರೋಲ್ ನಿಯಮ ಪರಿಷ್ಕರಣೆಗೆ ಸುಪ್ರೀಂ ಸಲಹೆ

Update: 2017-10-02 19:21 IST

ಹೊಸದಿಲ್ಲಿ, ಅ.2: ಸುಧಾರಿಸುವ ಲಕ್ಷಣ ತೋರುವ ಕೈದಿಗಳಿಗೂ ಸಮಾಜದೊಂದಿಗೆ ಸಂಪರ್ಕ ಸಾಧಿಸುವ ಹಾಗೂ ‘ಸ್ವಚ್ಛ ಗಾಳಿ’ ಸೇವಿಸುವ ಅವಕಾಶ ನೀಡಬೇಕು ಎಂದು ತಿಳಿಸಿರುವ ಸುಪ್ರೀಂಕೋರ್ಟ್, ಸುದೀರ್ಘಾವಧಿ ಜೈಲುಶಿಕ್ಷೆಗೆ ಒಳಗಾಗಿರುವ ಕೈದಿಗಳು ಪೆರೋಲ್ (ವಾಗ್ದಾನದ ಮೇಲೆ ಬಿಡುಗಡೆ)ಗೆ ಸಲ್ಲಿಸುವ ಅರ್ಜಿಯ ಬಗ್ಗೆ ಗಮನ ಹರಿಸುವಾಗ ‘ಮಾನವೀಯತೆ’ಯ ದೃಷ್ಟಿ ಇರಲಿ ಎಂದು ತಿಳಿಸಿದೆ.

 ಪೆರೋಲ್ ಮಂಜೂರುಗೊಳಿಸುವ ಸಂದರ್ಭ ಸರಕಾರ ಇನ್ನೂ 1955ರಲ್ಲಿ ರೂಪಿಸಿದ ನಿಯಮಗಳನ್ನೇ ಅನುಸರಿಸುತ್ತಿದ್ದು ಇದನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡಿರುವ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಪರಾಧಿಗಳು ತಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಬೇಕು ಎಂಬುದು ಶಿಕ್ಷೆ ನೀಡುವ ಹಿಂದಿರುವ ಉದ್ದೇಶವಾಗಿದೆ. ಹಾಗಿರುವಾಗ ಸುಧಾರಣೆಯ ಲಕ್ಷಣ ತೋರುವ ಕೈದಿಗಳ ಬಗ್ಗೆ ಮಾನವೀಯ ದೃಷ್ಟಿಕೋನದಿಂದ ವರ್ತಿಸಬೇಕಿದೆ ಎಂದು ನ್ಯಾಯಪೀಠ ತಿಳಿಸಿದೆ. ಆದರೆ ಎಲ್ಲಾ ಕೈದಿಗಳೂ ತಮಗೆ ವಿಧಿಸಲಾಗಿರುವ ಪೂರ್ಣ ಪ್ರಮಾಣದ ಶಿಕ್ಷೆಯನ್ನು ಅನುಭವಿಸಲೇಬೇಕು ಎಂದೂ ನ್ಯಾಯಪೀಠ ತಿಳಿಸಿದೆ.

 ಅಲ್ಪಾವಧಿಗೆ ಕೈದಿಯನ್ನು ಜೈಲಿನಿಂದ ಬಿಡುಗಡೆಗೊಳಿಸಿದರೆ ಆತನಿಗೆ ತನ್ನ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಅವಕಾಶ ಸಿಕ್ಕಂತಾಗುತ್ತದೆ. ಅಲ್ಲದೆ ಸಮಾಜದೊಂದಿಗೆ ಸಂಪರ್ಕ ಹೊಂದಿರಲೂ ಸಾಧ್ಯವಾಗುತ್ತದೆ. ದೀರ್ಘಾವಧಿಯ ಶಿಕ್ಷೆಗೆ ಒಳಗಾಗಿರುವ ಕೈದಿಗಳು ಉತ್ತಮ ನಡತೆ ಹೊಂದಿದ್ದಲ್ಲಿ ಹಾಗೂ ಸುಧಾರಣೆಯ ಲಕ್ಷಣ ತೋರಿದಲ್ಲಿ ಅವರಿಗೆ ‘ಹೊಸ ಗಾಳಿ’ಯ ಸೇವನೆಗೆ ಅವಕಾಶ ಮಾಡಿಕೊಡುವ ಮೂಲಕ ಅವರನ್ನು ಪುನಶ್ಚೈತನ್ಯಗೊಳಿಸುವ ಕಾರ್ಯ ಮಾಡಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News