ಶಸ್ತ್ರಾಸ್ತ್ರ ಅನುಮತಿ ಪ್ರಕರಣ: ಬಿಎಸ್‌ಎಫ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ, ಅ.2: ಜಮ್ಮು ಕಾಶ್ಮೀರದ ಸೂಕ್ಷ್ಮಪ್ರದೇಶಗಳಾದ ರಜೌರಿ ಮತ್ತು ಶೋಫಿಯಾನ್ ಜಿಲ್ಲೆಯಲ್ಲಿ ನಕಲಿ ದಾಖಲೆಪತ್ರ ಸೃಷ್ಟಿಸಿ ಖಾಸಗಿ ಶಸ್ತ್ರಾಸ್ತ್ರ ಅನುಮತಿ ಪಡೆಯಲು ತನ್ನ ಸಹೋದ್ಯೋಗಿಗಳಿಗೆ ನೆರವಾದ ಆರೋಪದಲ್ಲಿ ಗಡಿಭದ್ರತಾ ಪಡೆ(ಬಿಎಸ್‌ಎಫ್)ಯ ಓರ್ವ ಕಮಾಂಡೆಂಟ್ ಸಹಿತ ಮೂವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಬಿಎಸ್‌ಎಫ್ 131 ಬೆಟಾಲಿಯನ್‌ನ ಮಾಜಿ ಕಮಾಂಡೆಂಟ್ ಸುಖ್‌ವೀಂದರ್ ಸಿಂಗ್, ಜಮ್ಮುವಿನಲ್ಲಿರುವ ‘ನವದುರ್ಗ ಗನ್‌ಹೌಸ್’ನ ಮಾಲಿಕ ಪಿ.ಕೆ.ಶರ್ಮ, ರಜೌರಿ ಜಿಲ್ಲೆಯ ನಿವೃತ್ತ ಜಿಲ್ಲಾಧಿಕಾರಿ ಫಕೀರ್‌ಚಂದ್ ಭಗತ್‌ರ ವಿರುದ್ಧ ವಂಚನೆ, ಒಳಸಂಚು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಉಲ್ಲಂಘನೆ ಹಾಗೂ ಭ್ರಷ್ಟಾಚಾರದ ಪ್ರಕರಣದಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
2013ರಲ್ಲಿ ಸುಖ್‌ವೀಂದರ್ ಸಿಂಗ್ ತನ್ನ ಅಧಿಕಾರದ ಪ್ರಭಾವ ಬಳಸಿಕೊಂಡು , ಬಿಎಸ್‌ಎಫ್ ಯೋಧರು ತಲಾ 12,000 ರೂ. ಪಾವತಿಸಿ ಪಿ.ಕೆ.ಶರ್ಮನಿಂದ ಖಾಸಗಿ ಶಸ್ತ್ರಾಸ್ತ್ರ ಲೈಸೆನ್ಸ್ ಪಡೆಯಬೇಕೆಂದು 9 ಯೋಧರ ಮನ ಒಲಿಸಿದ್ದರು ಎಂದು, ಬಿಎಸ್‌ಎಫ್‌ನಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದ ಕೆ.ಕೆ.ಶರ್ಮ 2014ರಲ್ಲಿ ದೂರು ನೀಡಿದ್ದರು. ಮೂರು ವರ್ಷ ನಡೆದ ವಿಚಾರಣೆಯ ಬಳಿಕ ಇದೀಗ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ.