×
Ad

ಸಿಖ್ ರಾಜಕಾರಣಿಗೆ ಕೆನಡದ ರಾಜಕೀಯ ಪಕ್ಷದ ಸಾರಥ್ಯ

Update: 2017-10-02 22:03 IST

ಟೊರಾಂಟೊ,ಅ.2: 38 ವರ್ಷ ವಯಸ್ಸಿನ ನ್ಯಾಯವಾದಿ ಜಗಮಿತ್ ಸಿಂಗ್ ಕೆನಡದ ಮೂರು ಅತೀ ದೊಡ್ಡ ರಾಜಕೀಯ ಪಕ್ಷಗಳಲ್ಲೊಂದಾದ ನ್ಯೂ ಡೆಮಾಕ್ರಾಟಿಕ್ ಪಾರ್ಟಿ(ಎನ್‌ಡಿಪಿ)ಯ ಚುನಾಯಿತ ಅಧ್ಯಕ್ಷನಾಗಿ ರವಿವಾರ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕೆನಡದಲ್ಲಿ ರಾಜಕೀಯ ಪಕ್ಷವೊಂದರ ಚುಕ್ಕಾಣಿ ಹಿಡಿದ ಪ್ರಪ್ರಥಮ ಭಾರತೀಯ ಹಾಗೂ ಸಿಖ್ ವ್ಯಕ್ತಿಯೆಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

 ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ಟೊರಾಂಟೊದ ವೆಸ್ಟ್‌ಮಿನಿಸ್ಟರ್ ಕ್ಯಾಸಲ್ ಹೊಟೇಲ್‌ನ ಮೆಟ್ರೊಪಾಲಿಟನ್ ಬಾಲ್‌ರೂಮ್‌ನಲ್ಲಿ ನಡೆದ ಮತದಾನದಲ್ಲಿ ಜಗಮಿತ್ ಸಿಂಗ್‌ಗೆ ಶೇ.50ಕ್ಕಿಂತಲೂ ಅಧಿಕ ಮತ ದೊರೆತಿದ್ದು,ಇಬ್ಬರು ಪ್ರತಿಸ್ಪರ್ಧಿ ಅಭ್ಯರ್ಥಿಗಳ ವಿರುದ್ಧ ನಿರಾಯಾಸವಾಗಿ ಜಯ ಸಾಧಿಸಿದ್ದಾರೆ.

    ಜಗಮಿತ್‌ಸಿಂಗ್ ಎನ್‌ಡಿಪಿಯ ನೂತನ ಸಾರಥಿಯಾಗಲಿದ್ದಾರೆ ಹಾಗೂ 2019ರಲ್ಲಿ ನಡೆಯಲಿರುವ ಕೆನಡದ ಸಂಸತ್ ಚುನಾವಣೆಯನ್ನು ಪಕ್ಷವು ಅವರ ನೇತೃತ್ವದಲ್ಲಿ ಎದುರಿಸಲಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

  ಅಧ್ಯಕ್ಷ ಹುದ್ದೆಗಾಗಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದರು. ನಿನ್ನೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಬೇಕಾದ ಶೇ.50ಕ್ಕೂ ಅಧಿಕ ಮತಗಳನ್ನು ಜಗಮಿತ್ ಈಗಾಗಲೇ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನೊಂದು ಸುತ್ತಿನ ಮತದಾನ ಅಕ್ಟೋಬರ್ 8ರಂದು ನಡೆಯಲಿದೆಯಾದರೂ, ಜಗಮಿತ್ ಪಕ್ಷ ಅಧ್ಯಕ್ಷನಾಗಿ ಆಯ್ಕೆ ಆಗುವುದು ಈಗಾಗಲೇ ಖಚಿತವಾಗಿದೆ.

ಇಂದು ನಡೆದ ಚುನಾಣೆಯಲ್ಲಿ 66 ಸಾವಿರ ಮತಗಳು ಚಲಾವಣೆಯಾಗಿದ್ದು, ಆ ಪೈಕಿ ಸಿಂಗ್‌ಗೆ 35 ಸಾವಿರಕ್ಕೂ ಅಧಿಕ ಮತಗಳು ದೊರೆತಿವೆ. ಅವರ ವಿರುದ್ಧ ಸ್ಪರ್ಧಿಸಿರುವ ಒಂಟಾರಿಯೊದ ಸಂಸದ ಚಾರ್ಲ್ಸ್ ಆ್ಯಂಗಸ್ ಕೇವಲ 12,075 ಮತಗಳನ್ನು ಪಡೆದಿದ್ದಾರೆ.

 ನರೇಂದ್ರ ಮೋದಿ ಸರಕಾರದ ಕಟುಟೀಕಾಕಾರದ ಜಗಮಿತ್‌ಸಿಂಗ್‌ಗೆ ಭಾರತವು 2013ರ ಡಿಸೆಂಬರ್‌ನಲ್ಲಿ ವೀಸಾ ನೀಡಲು ನಿರಾಕರಿಸಿತ್ತು. ಪ್ರಸ್ತುತ ಒಂಟಾರಿಯೊ ಪ್ರಾಂತೀಯ ಸಂಸತ್‌ನ ಸದಸ್ಯರಾಗಿರುವ ಅವರು ಬ್ರಾಮ್ಲಿಯಾ-ಗೊರೆ-ಮಾಲ್ಟನ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

   ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವಿನ ಬಳಿಕ ಕೆನಡಾದ ಹಾಲಿ ಪ್ರಧಾನಿ ಜಸ್ಟಿನ್ ಟ್ರುಡೊವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಗುರುಮಿತ್ ದೇಶದಲ್ಲಿ ಹೆಚ್ಚುತ್ತಿರುವ ಉದ್ಯೋಗದ ಅಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.ಟ್ರುಡೊವ್ ಅವರು ಪ್ರಧಾನಿ ಕೆಲಸವನ್ನು ಹವ್ಯಾಸವೆಂಬಂತೆ ಕಾಣುತ್ತಿದ್ದಾರೆಂದು ಅವರು ಟೀಕಿಸಿದರು.

 ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ದೊರೆತ ಗೆಲುವು ನನಗೆ ಭೀತಿಯ ರಾಜಕೀಯದ ವಿರುದ್ಧ ವಿಭಜನವಾದಿ ರಾಜಕೀಯದ ವಿರುದ್ಧ ಹೋರಾಡಲು ಧೈರ್ಯವನ್ನು ತಂದುಕೊಟ್ಟಿದೆ.

ಗುರುಮಿತ್ ಸಿಂಗ್, ಎನ್‌ಡಿಪಿ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News