ಮೇರಿಕೋಮ್ ಸರಿತಾದೇವಿಗೆ ಸ್ಥಾನ

Update: 2017-10-02 18:27 GMT

ಹೊಸದಿಲ್ಲಿ, ಅ.2: ವಿಯೆಟ್ನಾಂನಲ್ಲಿ ನಡೆಯಲಿರುವ ಏಷ್ಯನ್ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಹಿರಿಯ ಬಾಕ್ಸಿಂಗ್ ತಾರೆ ಮೇರಿ ಕೋಮ್ ಭಾಗವಹಿಸಲಿದ್ದು, 48 ಕೆ.ಜಿ. ತೂಕ ವಿಭಾಗದಲ್ಲಿ ಯುವ ಬಾಕ್ಸರ್‌ಗಳಿಂದ ತೀವ್ರ ಸ್ಪರ್ಧೆ ಎದುರಿಸುವ ಸಾಧ್ಯತೆಯಿದೆ. ಮೂರು ದಿನಗಳ ಕಾಲ ನಡೆದ ಟ್ರಯಲ್ಸ್‌ನಲ್ಲಿ ಮೇರಿ ಕೋಮ್ ಹಾಗೂ ಎಲ್.ಸರಿತಾದೇವಿ(64ಕೆ.ಜಿ.) ಏಷ್ಯನ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಏಷ್ಯನ್ ಚಾಂಪಿಯನ್‌ಶಿಪ್ ನ.2 ರಿಂದ 11ರ ತನಕ ನಡೆಯಲಿದೆ.

ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಆರನೆ ಬಾರಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ಯಸಭಾ ಸಂಸದೆ ಮೇರಿಕೋಮ್ ಆಯ್ಕೆ ಟ್ರಯಲ್ಸ್ ವೇಳೆ ಎಲ್ಲ ಪಂದ್ಯಗಳಲ್ಲಿ ಜಯಶಾಲಿಯಾದರು.

ಐದು ಬಾರಿ ಏಷ್ಯನ್ ಚಾಂಪಿಯನ್‌ಶಿಪ್ ಜಯಿಸಿರುವ 35ರ ಹರೆಯದ ಸರಿತಾದೇವಿ 60 ಕೆ.ಜಿ. ಬದಲಿಗೆ 64 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಮೇರಿಕೋಮ್ ಹಾಗೂ ಸರಿತಾ 2015ರ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಆಡಿರಲಿಲ್ಲ. ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಚಿನ್ನ ಜಯಿಸಲು ವಿಫಲವಾಗಿತ್ತು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಸೋನಿಯಾ ಲಾಥರ್(57ಕೆ.ಜಿ.), ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ವಿಜೇತೆ ಸವೀಟಿ ಬೂರಾ(81ಕೆ.ಜಿ.), ಪೂಜಾ ರಾಣಿ(75ಕೆಜಿ) ಹಾಗೂ ಸೀಮಾ ಪೂನಿಯಾ(+81ಕೆ.ಜಿ.) ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತ ಏಷ್ಯನ್ ಚಾಂಪಿಯನ್‌ಶಿಪ್ ಸಾಧನೆಯ ಪಟ್ಟಿಯಲ್ಲಿ 3ನೆ ಸ್ಥಾನದಲ್ಲಿದೆ. ಭಾರತ ಈ ತನಕ ಒಟ್ಟು 60 ಪದಕಗಳನ್ನು ಜಯಿಸಿದೆ. ಇದರಲ್ಲಿ 19 ಚಿನ್ನ, 21 ಬೆಳ್ಳಿ ಹಾಗೂ 20 ಕಂಚು ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News