ಪಯ್ಯನ್ನೂರು: ಅಮಿತ್ ಶಾ ಅವರ ರ‍್ಯಾಲಿಗೆ ತೆರಳುತ್ತಿದ್ದ ಬಸ್ಸಿಗೆ ಕಲ್ಲೆಸೆತ

Update: 2017-10-03 08:59 GMT

ಪಯ್ಯನ್ನೂರು, ಅ.3: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರಂಭಿಸುವ ಜನರಕ್ಷಣಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಬಿಜೆಪಿ ಕಾರ್ಯಕರ್ತರಿದ್ದ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದ ಘಟನೆ ಇಲ್ಲಿಗೆ ಸಮೀಪದ ಪಳ್ಳಿಕೆರೆಯಲ್ಲಿ ಇಂದು ಪೂರ್ವಾಹ್ನ ನಡೆದಿದೆ.
ಕಲ್ಲೆಸೆತದಿಂದ ಬಸ್ಸಿನ ಗಾಜಿಗೆ ಹಾನಿಯಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಪರಿಸರದಲ್ಲಿ ಕೆಲಕಾಲ ಉದ್ವಿಗ್ನ ನೆಲೆಸಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಸಿಪಿಎಂ ವಿರುದ್ಧ ದೇಶವ್ಯಾಪಿ ಹೋರಾಟ: ಅಮಿತ್ ಶಾ
ಪಯ್ಯನ್ನೂರಿನಲ್ಲಿ ಆರಂಭಿಸಲಾದ ಬಿಜೆಪಿಯ ಜನರಕ್ಷಣಾ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಿದರು. 

ಕುಮ್ಮನಂ ರಾಜಶೇಖರನ್ ರಿಗೆ ಪಕ್ಷದ ಪತಾಕೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಅಮಿತ್ ಶಾ, ಸಿಪಿಎಂ ಆಡಳಿತದಲ್ಲಿ ಸರಣಿ ಹತ್ಯೆಗಳು ನಡೆಯುತ್ತಿವೆ. 84 ಅಮಾಯಕ ಆರೆಸ್ಸೆಸ್, ಬಿಜಿಪಿ ಕಾರ್ಯಕರ್ತರನ್ನು ಸಿಪಿಎಂ ಹತ್ಯೆಗೈದಿದೆ. ಈ ಹಿನ್ನೆಲೆ ಸಿಪಿಎಂ ವಿರುದ್ಧ ದೇಶವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಸಮಾರಂಭದಲ್ಲಿ ಕೇಂದ್ರ ಸಚಿವ ಅಲ್ಫೋನ್ಸೋ ಕಣ್ಣಾo ತಾನಂ, ಬಿಜೆಪಿ ಮುಖಂಡರಾದ ವಿ.ಮುರಳೀಧರನ್, ಸಿ.ಟಿ.ರವಿ, ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ, ರಿಚರ್ಡ್  ಹೇ, ಶಾಸಕ ಒ.ರಾಜಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದ 11 ಜಿಲ್ಲೆಗಳ ಮೂಲಕ ಇಂದಿನಿಂದ 17ರ ತನಕ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಮತೀಯ ತೀವ್ರವಾದ, ಲವ್  ಜಿಹಾದ್ , ಸಿಪಿಎಂ ನ ಹಿಂಸಾತ್ಮಕ ರಾಜಕೀಯ ಮೊದಲಾದ ಹಲವು ಆರೋಪಗಳನ್ನು ಮುಂದಿಟ್ಟುಕೊಂಡು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆ ಅ.17ರಂದು ತಿರುವನಂತಪುರದಲ್ಲಿ ಸಮಾಪನಗೊಳ್ಳಲಿದೆ.


ಸೋಮವಾರ ತಡರಾತ್ರಿ ಮಂಗಳೂರಿನಿಂದ ಆಗಮಿಸಿದ ಅಮಿತ್ ಶಾ ಬೇಕಲದಲ್ಲಿ ತಂಗಿದ್ದು, ಬೆಳಗ್ಗೆ ತಳಿಪರಂಬ ರಾಜಾರಾಜೇಶ್ವರಿ ದೇವಸ್ಥಾನಕ್ಕೆ  ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಪಯ್ಯನ್ನೂರಿಗೆ ಆಗಮಿಸಿದ ಅಮಿತ್ ಶಾ, ಈ ಹಿಂದಿನ ವರ್ಷಗಳಲ್ಲಿ ರಾಜಕೀಯ ಹಿಂಸಾಚಾರಕ್ಕೆ ಬಲಿಯಾದ ಪಕ್ಷದ ಕಾರ್ಯಕರ್ತರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನಡೆಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News