ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರ್ಯಾಗಾರ ಪೂರಕವಾಗಲಿ: ಸಚಿವ ರೈ

Update: 2017-10-03 08:21 GMT

ಮಂಗಳೂರು, ಅ.3: ದ.ಕ. ಜಿಲ್ಲೆಯು ಉದ್ಯಮ, ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಂದ ಮುಂದುವರಿದ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ನವ ಕರ್ನಾಟಕ 2025ರ ವಿಷನ್‌ನಡಿ ರೂಪಿಸಲಾಗುವ ದ.ಕ. ಜಿಲ್ಲೆಯ ಅಭಿವೃದ್ಧಿ ಮುನ್ನೋಟವು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ವಿನೂತನ ನವ ಕರ್ನಾಟಕ 2025 ಸಮಗ್ರ ಅಭಿವೃದ್ದಿಯ ನಕಾಶೆ ಕಾರ್ಯಕ್ರಮದಡಿ ದ.ಕ. ಜಿಲ್ಲೆಯ ಅಭಿವೃದ್ಧಿಯ ಮುನ್ನೋಟಗಳನ್ನು ರೂಪಿಸಲು ಇಂದು ಹಮ್ಮಿಕೊಳ್ಳಲಾದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ 2025ರ ರಾಜ್ಯದ ಅಭಿವೃದ್ಧಿ ನಕಾಶೆಯಲ್ಲಿ ಪ್ರತಿಯ್ಬಿರ ಪಾಲುದಾರಿಕೆಯನ್ನು ಒಳಗೊಳ್ಳುವ ವಿನೂತನ ಪ್ರಯತ್ನ ಇದಾಗಿದೆ. ದ.ಕ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ಜಿಲ್ಲೆಯ ಗಣ್ಯರು, ಬುದ್ಧಿಜೀವಿಗಳನ್ನು ಒಳಗೊಂಡು ಈ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯ ಸಾಮರ್ಥ್ಯ ಕ್ಷೇತ್ರಗಳತ್ತ ಗಮನ ಅಗತ್ಯ: ಲೋಬೋ

ಶಾಸಕ ಜೆ.ಆರ್. ಲೋಬೋ ಮಾತನಾಡಿ, ದ.ಕ. ಜಿಲ್ಲೆಯು ಶಿಕ್ಷಣ, ಪ್ರವಾಸೋದ್ಯಮ, ಆರೋಗ್ಯ, ಸೇವೆಗಳು, ಬಂದರು, ಮೀನುಗಾರಿಕೆ, ವಾಣಜ್ಯ, ಕೈಗಾರಿಕೆ, ತೋಟಗಾರಿಕಾ ಕ್ಷೇತ್ರದಲ್ಲಿ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಷೇತ್ರಗಳಲ್ಲಿ ಭವಿಷ್ಯದ ಅಗತ್ಯತೆಯ ಕುರಿತಾದ ಅಭಿವೃದ್ಧಿಗೆ ಗಮನ ನೀಡುವುದು ಅತ್ಯಗತ್ಯ ಎಂದು ಅಭಿಪ್ರಾಯಿಸಿದರು.

ದ.ಕ. ಜಿಲ್ಲೆ ಬಂದರು ಹಾಗೂ ಮೀನುಗಾರಿಕೆಗೆ ಹೆಸರುವಾಸಿಯಾಗಿದ್ದರೂ, ಈ ಕ್ಷೇತ್ರಗಳೆರಡೂ ನಿರ್ಲಕ್ಷಕ್ಕೆ ಗುರಿಯಾಗಿದೆ. ಐಟಿ ಕ್ಷೇತ್ರಕ್ಕೆ ವಿಫುಲ ಅವಕಾಶವಿದ್ದರೂ ಸಂಪರ್ಕದ ಕೊರತೆಯಿಂದ ಐಟಿ ಸಂಸ್ಥೆಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿವೆ. ಪಡುಬಿದ್ರೆಯಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಕಾರ್ಯ ಯೋಜನೆ ರೂಪಿಸುವ ಬದಲು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಯೊಂದಿಗೆ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಮಕ್ಕಳಲ್ಲಿ ಶಿಸ್ತು ಬೆಳೆಸುವ ನಿಟ್ಟಿನಲ್ಲಿ ಪ್ರತಿ ಶಾಲಾ ಕಾಲೇಜುಗಳಲ್ಲಿ ಎಲ್ಲಾ ಮಕ್ಕಳು ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಗೈಡ್ಸ್‌ಗೆ ಮಕ್ಕಳ ಸೇರ್ಪಡೆಗೆ ಅವಕಾಶ ಸಿಗಬೇಕು. ಸಂಚಾರ ನಿಯಂತ್ರಣ, ಇ ಆಡಳಿತಕ್ಕೆ ಆದ್ಯತೆ ನೀಡುವ ಮೂಲಕ ಜನಸಾಮಾನ್ಯರು ಸರಕಾರಿ ಕಚೇರಿಗೆ ಹೋಗುವುದು ಹಿಂಸೆ ಎಂಬ ಮನೋಭಾವವನ್ನು ಬದಲಾಯಿಸುವಂತಹ ಸಾಮರ್ಥ್ಯವುಳ್ಳ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕವನ್ನು 2025ರ ವೇಳೆಗೆ ಮುಂಚೂಣಿಗೆ ಕರೆದೊಯ್ಯಲು ಪ್ರತಿ ನಾಗರಿಕರ ಆಲೋಚನೆಗಳನ್ನು ಹಂಚಿಕೊಳ್ಳಲು ಈ ಜಿಲ್ಲಾ ಮಟ್ಟದ ಕಾರ್ಯಾಗಾರದ ಮೂಲಕ ಅವಕಾಶ ಕಲ್ಪಿಸಿದ್ದಾರೆ ಎಂದರು.

ಈ ಮುನ್ನೋಟ ಕೈಪಿಡಿ ಯೋಜನೆ ಐದು ತಿಂಗಳವರೆಗೆ ನಡೆಯಲಿದೆ. ಡಿಸೆಂಬರ್ 31ಕ್ಕೆ ಈ ಕೈಪಿಡಿಯನ್ನು ಪೂರ್ಣಗೊಳಿಸಲಾಗುತ್ತದೆ. ಜಿಲ್ಲಾ ಮಟ್ಟದ ಚರ್ಚೆಗಳಲ್ಲಿ ಮುಂದಿನ 7 ವರ್ಷಗಳಲ್ಲಿ ಕರ್ನಾಟಕದ ಅಭಿವೃದ್ಧಿಯಲ್ಲಿ ಏನು ಆಗಬೇಕೆಂದು ಬಯಸುತ್ತೀರಿ ಎಂಬ ಪ್ರಶ್ನೆಗಳಿದ್ದು, ಇದು ದುರ್ಬಲ ವರ್ಗದ ಜನರ ಅಭಿಪ್ರಾಯಗಲು ಹಾಗೂ ದೃಷ್ಟಿಕೋನಗಳನ್ನು ಒಳಗೊಂಡಿರುತ್ತದೆ. ರಾಜ್ಯ ಸರಕಾರದ ಸಂವಹನಾಧಾರಿತ ಡಿಜಿಟಲ್ ಮಾಧ್ಯಮವಾದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಇದಕ್ಕಾಗಿ ಬಳಸಲಾಗುತ್ತಿದೆ. ಯುವಜನರನ್ನು ಸಂಪರ್ಕಿಸುವ ಹಾಗೂ ಸಕ್ರಿಯಗೊಳಿಸುವ ವೆಬ್‌ಸೈಟನ್ನು ಕೂಡಾ ರೂಪಿಸಲಾಗಿದೆ. ಇಲ್ಲಿಯೂ ಸಾರ್ವಜನಿಕರು ತಮ್ಮ ಸಲಹೆ, ಸೂಚನೆಗಳನ್ನು ನೀಡಿದ್ದಲ್ಲಿ ಅದನ್ನು ಪರಿಗಣಿಸಲಾಗುತ್ತದೆ ಎಂದು ಅವರು ಅವರು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಮೇಯರ್ ಕವಿತಾ ಸನಿಲ್, ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ದಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News