ಪಿಎಂಎಲ್ ಅಧ್ಯಕ್ಷರಾಗಿ ಶರೀಫ್ ಪುನರಾಯ್ಕೆ

Update: 2017-10-03 14:48 GMT

ಇಸ್ಲಾಮಾಬಾದ್, ಅ. 3: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಝ್ ಶರೀಫ್ ಮಂಗಳವಾರ ದೇಶದ ಆಡಳಿತಾರೂಢ ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು. ಅವರು ರಾಜಕೀಯಕ್ಕೆ ಮರಳಲು ಅವಕಾಶ ಮಾಡಿಕೊಡುವ ವಿವಾದಾಸ್ಪದ ಮಸೂದೆಯೊಂದನ್ನು ಸಂಸತ್ತು ಅಂಗೀಕರಿಸಿದ ಹಿನ್ನೆಲೆಯಲ್ಲಿ ಇದು ಸಾಧ್ಯವಾಯಿತು.

 ಶರೀಫ್ ಮತ್ತು ಅವರ ಕುಟುಂಬ ಸದಸ್ಯರು ವಿದೇಶಗಳಲ್ಲಿ ಅಕ್ರಮ ಹೂಡಿಕೆ ಹೊಂದಿದ್ದಾರೆ ಎನ್ನುವುದನ್ನು ಪನಾಮ ದಾಖಲೆಗಳು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಸುಪ್ರೀಂ ಕೋರ್ಟ್ ಜುಲೈ 28ರಂದು ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿತ್ತು.

ಆ ಬಳಿಕ, 67 ವರ್ಷದ ಶರೀಫ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.

1976ರ ಜನತಾ ಪ್ರಾತಿನಿಧ್ಯ ಕಾಯ್ದೆಯನ್ವಯ, ಅಮಾನತುಗೊಂಡ ವ್ಯಕ್ತಿಯೊಬ್ಬ ಯಾವುದೇ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ವಹಿಸುವಂತಿಲ್ಲ.

ಆದರೆ, ವಿವಾದಾಸ್ಪದ ಚುನಾವಣಾ ಮಸೂದೆ 2017ನ್ನು ನ್ಯಾಶನಲ್ ಅಸೆಂಬ್ಲಿ ಅಂಗೀಕರಿಸುವುದರೊಂದಿಗೆ ಪಕ್ಷದ ಮುಖ್ಯಸ್ಥರಾಗುವ ಅವರ ಹಾದಿ ಸುಗಮಗೊಂಡಿತು.

ಸರಕಾರಿ ಹುದ್ದೆಯನ್ನು ವಹಿಸಿಕೊಳ್ಳುವುದರಿಂದ ಅನರ್ಹಗೊಂಡಿರುವ ರಾಜಕಾರಣಿಗಳು ರಾಜಕೀಯ ಪಕ್ಷವೊಂದರ ಮುಖ್ಯಸ್ಥರಾಗಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News