ಎಲ್ಲಾ ರಾಜ್ಯಗಳು ಪಾನಮುಕ್ತವಾಗಲಿ: ಜಯರಾಂ ಭಟ್

Update: 2017-10-04 07:14 GMT

ಮಂಗಳೂರು, ಅ.4: ಕುಟುಂಬವೊಂದರಲ್ಲಿ ಮದ್ಯಪಾನ ವ್ಯಕ್ತಿಯಿದ್ದರೆ ಆ ಕುಟುಂಬದ ನೆಮ್ಮದಿಯೇ ಹಾಳಾಗುತ್ತದೆ, ಜತೆಗೆ ವ್ಯಸನಿಯ ಆರೋಗ್ಯವೂ ಕೆಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಎಲ್ಲಾ ರಾಜ್ಯಗಳು ಪಾನಮುಕ್ತವಾಗಬೇಕಿದೆ ಎಂದು ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್ ಅಭಿಪ್ರಾಯಿಸಿದ್ದಾರೆ.

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಗರದ ಪುರಭವನದಲ್ಲಿಂದು ಆಯೋಜಿಸಲಾಗಿದ್ದ ಜನಜಾಗೃತಿ ಸಮಾವೇಶ ಹಾಗೂ ಪಾನಮುಕ್ತರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜನಜಾಗೃತಿ ವೇದಿಕೆಯು ಸಾವಿರಾರು ಶಿಬಿರಗಳ ಮೂಲಕ ಈಗಾಗಲೇ 77,000 ಕ್ಕೂ ಅಧಿಕ ಮಂದಿಯ ಮನ ಪರಿವರ್ತಿಸಿ ಮದ್ಯಪಾನ ವ್ಯಸನದಿಂದ ದೂರವಿಡುವಲ್ಲಿ ಶ್ರಮದಾಯಕ ಕಾರ್ಯ ನಿರ್ವಹಿಸುತ್ತಿದ್ದು, ಅಭಿನಂದನೀಯ ಎಂದವರು ಹೇಳಿದರು. ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ದೇಶದ ಕೆಲ ರಾಜ್ಯಗಳಲ್ಲಿ ಈಗಾಗಲೇ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೆಲ ರಾಜ್ಯಗಳಲ್ಲಿ ಭಾಗಶಃ ನಿಷೇಧಿಸಲಾಗಿದ್ದು, ಆ ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದೆ ಎಂದರು.

ಜನಜಾಗೃತಿ ವೇದಿಕೆ ವತಿಯಿಂದ ಮಾದಕ ವಸ್ತುಗಳನ್ನು ವಿರೋಧಿಸುವ ವರ್ಣ ಜಾಗೃತಿ ಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದ ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಬುದ್ಧಿಜೀವಿಗಳ ಜತೆ ಸಾಮಾಜಿಕ ಜೀವಿಗಳಾಗಿರುವ ಮನುಷ್ಯ ಒಂದಿಲ್ಲೊಂದು ಹವ್ಯಾಸವನ್ನು ಹೊಂದಿರುತ್ತಾನೆ. ಆದರೆ ಕೆಟ್ಟ ಹವ್ಯಾಸಗಳು ವ್ಯಕ್ತಿಯ ಕುಟುಂಬದ ಮೇಲೆ ಪರಿಣಾಮ ಬೀಳುತ್ತದೆ. ಹವ್ಯಾಸ ಚಟವಾದಾಗ ಅದು ಆತನ ಕುಟುಂಬ ಮಾತ್ರವಲ್ಲದೆ, ಸಮಾಜ, ದೇಶದ ಮೇಲೆಯೇ ಪರಿಣಾಮ ಬೀರುತ್ತದೆ. ದುಶ್ಚಟಗಳಿಂದ ಹೊರಬರುವುದು ಕಷ್ಟದ ಕೆಲಸವಾಗಿದ್ದು, ವ್ಯಕ್ತಿಯ ಮನೋಶಕ್ತಿಯಿಂದ ಮಾತ್ರ ಅದು ಸಾಧ್ಯವಾಗುತ್ತದೆ. ಇಂತಹ ವ್ಯವಸ್ಥೆಯಲ್ಲಿ ಜನಜಾಗೃತಿ ಮಾಡುತ್ತಿರುವ ಕಾರ್ಯ ಅಭಿನಂದನೀಯ ಎಂದರು.

ಅಖಲಿ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆ.ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದ.ಕ. ಹಾಗೂಉಡುಪಿ ಜಿಲ್ಲಾಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಚಂದ್ರಶೇಖರ್ ನೆಲ್ಯಾಡಿ, ಶ್ರೀಧರ್‌ರಾವ್ ಉಪಸ್ಥಿತರಿದ್ದರು.

ಈ ಸಂದರ್ಭ ಮದ್ಯಪಾನ ವರ್ಜನ ಶಿಬಿರದ ಮೂಲಕ ಪಾನಮುಕ್ತರಾದವರನ್ನು ಸಾಂಕೇತಿಕವಾಗಿ ಅಭಿನಂದಿಸಲಾಯಿತು. ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕಿ ಆಶಯ ಭಾಷಣ ಮಾಡಿದರು. ವೇದಿಕೆಯ ಮಂಗಳೂರು ತಾಲೂಕು ಅಧ್ಯಕ್ಷ ಮಹಾಬಲ ಚೌಟ ಸ್ವಾಗತಿಸಿದರು. ದಯಾನಂದ ಕತ್ತಲ್‌ಸಾರ್ ಕಾರ್ಯಕ್ರಮ ನಿರೂಪಿಸಿದರು.


ಮದ್ಯಪಾನ ಸಂಪೂರ್ಣ ನಿಷೇಧದಿಂದ ವಿಕೋಪಕ್ಕೆ ತಿರುಗುವ ಆತಂಕ: ಡಿಸಿ

ಈಗಾಗಲೇ ಕೆಲ ರಾಜ್ಯಗಳಲ್ಲಿ ಮದ್ಯಪಾನವನ್ನು ನಿಷೇಧಿಸಲಾಗಿದೆ. ಕರ್ನಾಟಕದಲ್ಲೂ ಮದ್ಯಪಾನ ನಿಷೇಧದ ಬಗ್ಗೆ ಚಿಂತನೆ ನಡೆದಿದೆಯಾದರೂ, ಸಂಪೂರ್ಣವಾಗಿ ನಿಷೇಧಿಸಿದರೆ, ಅದರ ಚಟಕ್ಕೆ ಒಳಗಾಗಿರುವವರು ಮಾದಕ ವಸ್ತುಗಳಿಗೆ ಬಲಿಯಾಗುವ, ಪರಿಸ್ಥಿತಿ ಬೇರೆ ರೀತಿಯಲ್ಲಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಬಗ್ಗೆ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News