ಕಾಮನ್ವೆಲ್ತ್ ಗೇಮ್ಸ್: ಭಾರತದ ಮೂವರು ಅಧಿಕಾರಿಗಳು ಆಯ್ಕೆ

Update: 2017-10-04 18:26 GMT

ಹೊಸದಿಲ್ಲಿ, ಅ.4: ಮುಂದಿನ ವರ್ಷ ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮೂವರು ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್) ತಿಳಿಸಿದೆ.

ಹಾಕಿ ಟೂರ್ನಿಗಳಲ್ಲಿ ದವಿಂದರ್ ಭಾಟಿಯಾ ತೀರ್ಪುಗಾರರಾಗಿ, ದೀಪಕ್ ಜೋಶಿ ಹಾಗೂ ದುರ್ಗಾ ದೇವಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

56ರ ಹರೆಯದ ದವಿಂದರ್ ಇತ್ತೀಚೆಗಷ್ಟೇ ಎಫ್‌ಐಎಚ್‌ನ ತಾಂತ್ರಿಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದರು. ಕಠಿಣ ಶ್ರಮಕ್ಕೆ ತಕ್ಕ ಫಲ ಲಭಿಸಿರುವುದಕ್ಕೆ ದವಿಂದರ್ ಸಂತಸ ವ್ಯಕ್ತಪಡಿಸಿದ್ದಾರೆ.

‘‘ನಾನು ಭಾರತದ ಮಾಜಿ ಹಾಕಿ ಆಟಗಾರ್ತಿಯಾಗಿದ್ದು, 1981ರಲ್ಲಿ ಏಷ್ಯಾಕಪ್ ಹಾಗೂ 1982ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದ ತಂಡದ ಸದಸ್ಯೆಯಾಗಿದ್ದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಡ್ಜ್ ಆಗಿ ಆಯ್ಕೆಯಾಗಿರುವುದು ನನಗೆ ನಿಜಕ್ಕೂ ತುಂಬಾ ಅಚ್ಚರಿ ತಂದಿದೆ. ಹಾಕಿ ಇಂಡಿಯಾದ ಪ್ರಯತ್ನ ಹಾಗೂ ನನ್ನ ಪರಿಶ್ರಮಕ್ಕೆ ಕೊನೆಗೂ ಫಲ ಲಭಿಸಿದೆ. ಈ ವಯಸ್ಸಿನಲ್ಲಿ ದೇಶವನ್ನು ಉನ್ನತಮಟ್ಟದ ಟೂರ್ನಿಯಲ್ಲಿ ಪ್ರತಿನಿಧಿಸುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ’’ ಎಂದು ದವಿಂದರ್ ಭಾಟಿಯಾ ಹೇಳಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ಗೆ ಅಂಪೈರ್‌ಗಳಾಗಿ ಆಯ್ಕೆಯಾಗಿರುವುದಕ್ಕೆ ಜೋಶಿ ಹಾಗೂ ದೇವಿ ಸಂತಸ ವ್ಯಕ್ತಪಡಿಸಿದ್ದಾರೆ.

‘‘ಎನ್‌ಐಎಸ್ ಡಿಪ್ಲೊಮಾ ಕೋರ್ಸ್ ಕೊನೆಗೊಳಿಸಿದ ಬಳಿಕ 2011ರಲ್ಲಿ ಕೋಚಿಂಗ್ ವೃತ್ತಿ ಆರಂಭಿಸಿದ್ದೆ. 2013ರಲ್ಲಿ ಹಾಕಿ ವರ್ಲ್ಡ್ ಲೀಗ್ ರೌಂಡ್-2 ಹಾಗೂ 2013ರ ಜೂನಿಯರ್ ಪುರುಷರ ಹಾಕಿ ವಿಶ್ವಕಪ್‌ನ ಅಭ್ಯಾಸ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಿತ್ತು. ಆನಂತರ ಅಂಪೈರ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆ’’ ಎಂದು ದೀಪಕ್ ಜೋಶಿ ಹೇಳಿದ್ದಾರೆ.

‘‘2003ರಲ್ಲಿ ಧರ್ಮಶಾಲಾದಲ್ಲಿನ ಸಾಯ್ ಹಾಸ್ಟೆಲ್‌ನಲ್ಲಿ ಕ್ರೀಡಾ ವೃತ್ತಿಜೀವನ ಆರಂಭಿಸಿದ್ದೆ. ಹಿಮಾಚಲ ಪ್ರದೇಶ ರಾಜ್ಯವನ್ನು ಪ್ರತಿನಿಧಿಸಿದ್ದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ಅಂಪೈರ್ ವೃತ್ತಿಯತ್ತ ಗಮನಹರಿಸಿದ್ದೆ. ಹಾಕಿ ಇಂಡಿಯಾ ನನಗೆ ಹಲವು ಕೊಡುಗೆ ನೀಡಿತ್ತು. ಇದೀಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಾರ್ಯನಿರ್ವಹಿಸುವ ಮಹತ್ತರ ಜವಾಬ್ದಾರಿ ನನಗೆ ಲಭಿಸಿದೆ’’ ಎಂದು 33ರ ಹರೆಯದ ದುರ್ಗಾ ದೇವಿ ಹೇಳಿದ್ದಾರೆ.

2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಭಾಗವಹಿಸಲಿದ್ದು, ಗೇಮ್ಸ್ ಗೋಲ್ಡ್‌ಕೋಸ್ಟ್‌ನಲ್ಲಿ ಎ.4 ರಿಂದ 15ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News