ನಾಳೆಯಿಂದ ಭಾರತದಲ್ಲಿ ಜೂನಿಯರ್ ಫುಟ್ಬಾಲ್ ಹಬ್ಬ

Update: 2017-10-05 18:03 GMT

ಹೊಸದಿಲ್ಲಿ, ಅ.5: ಸಾಮರ್ಥ್ಯವಿದ್ದರೂ ಫುಟ್ಬಾಲ್‌ನಲ್ಲಿ ಏನನ್ನೂ ಸಾಧಿಸುತ್ತಿಲ್ಲ ಎಂದು ಈ ಹಿಂದೆ ಫಿಫಾದಿಂದ ಟೀಕೆಗೆ ಗುರಿಯಾಗಿದ್ದ ಭಾರತ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಟೂರ್ನಮೆಂಟ್‌ನ ಆತಿಥ್ಯವಹಿಸಿಕೊಳ್ಳುವ ಮೂಲಕ ಫುಟ್ಬಾಲ್‌ನಲ್ಲಿ ಕ್ರಾಂತಿ ಮಾಡುವತ್ತ ಚಿತ್ತವಿರಿಸಿದೆ. ಕಿರಿಯರ ಫುಟ್ಬಾಲ್ ಟೂರ್ನಿಯ ಮೂಲಕ ಭವಿಷ್ಯದ ತಾರೆಯರನ್ನು ರೂಪಿಸುವ ಆಶಯದಲ್ಲಿದೆ.

ಭಾರತ ಇದೇಮೊದಲ ಬಾರಿ ಫಿಫಾ ವಿಶ್ವಕಪ್‌ನ ಆತಿಥ್ಯವಹಿಸಿಕೊಂಡಿದೆ. ವಿಶ್ವಕಪ್‌ನ ಮೊದಲ ದಿನವಾದ ಶುಕ್ರವಾರ ನಾಲ್ಕು ಪಂದ್ಯಗಳು ನಡೆಯಲಿದ್ದು ದಿಲ್ಲಿ ಹಾಗೂ ಮುಂಬೈ ಫುಟ್ಬಾಲ್ ಸ್ಟೇಡಿಯಂಗಳಲ್ಲಿ ಪಂದ್ಯ ನಡೆಯಲಿದೆ.

ಬ್ರೆಝಿಲ್ ತಂಡ ಸ್ಟಾರ್ ಆಟಗಾರ ವಿನಿಸಿಯಸ್ ಜೂನಿಯರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ವಿನಿಸಿಯಸ್ ಪ್ರತಿನಿಧಿಸುತ್ತಿರುವ ಕ್ಲಬ್ ಅವರಿಗೆ ವಿಶ್ವಕಪ್‌ನಲ್ಲಿ ಆಡಲು ಅನುಮತಿ ನಿರಾಕರಿಸಿದೆ. ಅಕ್ಟೋಬರ್ 28ರ ತನಕ ನಡೆಯಲಿರುವ ವಿಶ್ವಕಪ್ ಟೂರ್ನಿಯು ಭಾರತದ ವಿವಿಧ ಆರು ಸ್ಥಳಗಳಲ್ಲಿ ನಡೆಯಲಿದೆ. 24 ತಂಡಗಳು ಸ್ಪರ್ಧಿಸಲಿದ್ದು ಆರು ತಾಣಗಳಲ್ಲಿ 52 ಪಂದ್ಯಗಳು ನಡೆಯಲಿವೆ.

 ಇಂಗ್ಲೆಂಡ್‌ನ ವಿಂಗರ್ ಜಾಡನ್ ಸ್ಯಾಂಚೊ, ಅಮೆರಿಕದ ಸ್ಟ್ರೈಕರ್ ಜೋಶ್ ಸರ್ಜೆಂಟ್, ಸ್ಪೇನ್‌ನ ಅಬೆಲ್ ರುಝ್, ಫೆರ್ರಾನ್ ಟೊರ್ರೆಸ್ ಹಾಗೂ ಜರ್ಮನಿಯ ನಾಯಕ ಜಾನ್-ಫ್ಲೆಟ್ ಅರ್ಪ್ ಕ್ಲಬ್ ಫುಟ್ಬಾಲ್‌ನಲ್ಲಿ ಈಗಾಗಲೇ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

 ಭಾರತದ 21 ಆಟಗಾರರು ಇದೇ ಮೊದಲ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ಒಟ್ಟು 504 ಯುವ ಫುಟ್ಬಾಲ್ ಆಟಗಾರರು ನೇಮರ್ ಜೂನಿಯರ್, ರೊನಾಲ್ಡಿನೊ, ಲೂಯಿಸ್ ಫಿಗೊ, ಕ್ಸೇವಿ, ಐಕರ್ ಕ್ಯಾಸಿಲ್ಲಸ್, ಗಿಯಾನ್‌ಲುಗಿ ಬಫನ್ ಹಾಗೂ ಅಂಡ್ರೆಸ್ ಇನೆಸ್ತಾರ ಹೆಜ್ಜೆ ಅನುಸರಿಸುವ ಕನಸು ಕಾಣುತ್ತಿದ್ದಾರೆ. ಈ ಎಲ್ಲ ಆಟಗಾರರು ಜೂನಿಯರ್ ವಿಶ್ವಕಪ್‌ನ ಮೂಲಕ ಬೆಳಕಿಗೆ ಬಂದ ಪ್ರತಿಭೆಗಳಾಗಿದ್ದಾರೆ.

1985ರಲ್ಲಿ ಫಿಫಾ 17 ವರ್ಷದೊಳಗಿನವರ ವಿಶ್ವಕಪ್ ಆರಂಭವಾದ ಬಳಿಕ ಭಾರತ ವಿಶ್ವಕಪ್‌ನ ಆತಿಥ್ಯವಹಿಸಿರುವ ಏಷ್ಯಾದ 5ನೆ ದೇಶವಾಗಿದೆ. ಈಗಾಗಲೇ ಚೀನಾ, ಜಪಾನ್, ದಕ್ಷಿಣ ಕೊರಿಯಾ ಹಾಗೂ ಯುಎಇ ಕಿರಿಯರ ವಿಶ್ವಕಪ್‌ನ ಆತಿಥ್ಯವಹಿಸಿಕೊಂಡಿದ್ದವು.ಭಾರತಕ್ಕೆ 2013ರಲ್ಲಿ ವಿಶ್ವಕಪ್ ಆತಿಥ್ಯದ ಹಕ್ಕು ನೀಡಲಾಗಿತ್ತು.

ಕಳಪೆ ಮೂಲಭೂತ ಸೌಕರ್ಯ, ತಳಮಟ್ಟದಲ್ಲಿ ಗುಣಮಟ್ಟದ ಕೋಚಿಂಗ್ ವ್ಯವಸ್ಥೆಯ ಕೊರತೆಯಿಂದಾಗಿ ಭಾರತ ಪ್ರಾದೇಶಿಕಮಟ್ಟದಲ್ಲಿ ಫುಟ್ಬಾಲ್‌ನಲ್ಲಿ ಸಾಧನೆ ತೋರಲು ಸಾಧ್ಯವಾಗಿಲ್ಲ. ಫಿಫಾ ಅಂಡರ್-17 ವಿಶ್ವಕಪ್‌ನ ನಂತರ ಭಾರತ 1950 ಹಾಗೂ 1960ರ ದಶಕದ ಸಾಧನೆಯನ್ನು ಮರುಕಳಿಸಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಹಾಗೂ ಕೆಲವು ಮಾಜಿ ಆಟಗಾರರು ಆಶಾವಾದ ವ್ಯಕ್ತಪಡಿಸಿದ್ದಾರೆ.

 ಭಾರತ ಅಂಡರ್-17 ವಿಶ್ವಕಪ್‌ನ್ನು ಯಶಸ್ವಿಯಾಗಿ ಆಯೋಜಿಸಿದರೆ 20 ವರ್ಷದೊಳಗಿನವರ ಫಿಫಾ ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳನ್ನು ಆಯೋಜಿಸುವ ಅವಕಾಶ ಸಿಗಲಿದೆ.

 17ನೆ ಆವೃತ್ತಿಯ ಟೂರ್ನಿಯಲ್ಲಿ ಅನನುಭವಿ ಭಾರತ ತಂಡ ಗ್ರೂಪ್ ಹಂತವನ್ನು ದಾಟುವ ಸಾಧ್ಯತೆಯಿಲ್ಲ. ‘ಎ’ ಗುಂಪಿನಲ್ಲಿರುವ ಭಾರತ ತಂಡ ಅಮೆರಿಕ, ಕೊಲಂಬಿಯಾ ಹಾಗೂ ಎರಡು ಬಾರಿಯ ಚಾಂಪಿಯನ್ ಘಾನಾ ತಂಡದಿಂದ ಕಠಿಣ ಸವಾಲು ಎದುರಿಸಲಿದೆ.

ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯಲಿರುವ ಎರಡು ತಂಡಗಳು ಹಾಗೂ ಮೂರನೆ ಸ್ಥಾನ ಪಡೆಯಲಿರುವ ನಾಲ್ಕು ಉತ್ತಮ ತಂಡಗಳು ನಾಕೌಟ್ ಹಂತಕ್ಕೆ ತೇರ್ಗಡೆಯಾಗಲಿವೆ.

ಮೂರು ಬಾರಿಯ ಚಾಂಪಿಯನ್ ಬ್ರೆಝಿಲ್, ಯುರೋಪಿಯನ್ ವಿನ್ನರ್‌ಗಳಾದ ಸ್ಪೇನ್ ಹಾಗೂ ಮೆಕ್ಸಿಕೊ ಟ್ರೋಫಿ ಜಯಿಸುವ ಫೇವರಿಟ್ ತಂಡಗಳಾಗಿವೆ. ಎರಡು ಬಾರಿಯ ಚಾಂಪಿಯನ್‌ಗಳಾದ ಘಾನ, ಜರ್ಮನಿ, ಇಂಗ್ಲೆಂಡ್ ಹಾಗೂ ಅಮೆರಿಕ ತಂಡಗಳು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿವೆ.

ಆಫ್ರಿಕದ ಚಾಂಪಿಯನ್ ಮಾಲಿ ಹಾಗೂ ತಾಂತ್ರಿಕವಾಗಿ ಶಕ್ತಿಶಾಲಿಯಾಗಿರುವ ಕೊಲಂಬಿಯಾ ಕಪ್ಪು ಕುದುರೆಗಳಾಗಿವೆ

ಪಂದ್ಯಗಳು

ಕೊಲಂಬಿಯಾ-ಘಾನಾ

►ಸ್ಥಳ: ಹೊಸದಿಲ್ಲಿ

►ಸಮಯ: ಸಂಜೆ : 5:00 ಗಂಟೆಗೆ

ನ್ಯೂಝಿಲೆಂಡ್-ಟರ್ಕಿ

►ಸ್ಥಳ: ಮುಂಬೈ

►ಸಮಯ: ಸಂಜೆ 5:00 ಗಂಟೆಗೆ

ಭಾರತ-ಅಮೆರಿಕ

►ಸ್ಥಳ: ಹೊಸದಿಲ್ಲಿ

►ಸಮಯ: ರಾತ್ರಿ 8 ಗಂಟೆಗೆ

ಪರಾಗ್ವೆ-ಮಾಲಿ

►ಸ್ಥಳ: ಮುಂಬೈ, 

►ಸಮಯ: ರಾತ್ರಿ 8 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News