ಪೊಲೀಸರಿಗೆ ಬೆದರಿಕೆ ಪ್ರಕರಣ: ಜಗದೀಶ್ ಕಾರಂತರಿಗೆ ಜಾಮೀನು

Update: 2017-10-07 06:46 GMT

ಪುತ್ತೂರು, ಅ.7: ಸಂಪ್ಯ ಠಾಣೆ ಎಸ್ಸೈ ಅಬ್ದುಲ್ ಖಾದರ್ ಮತ್ತು ಸಿಬ್ಬಂದಿಯ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತರಿಗೆ ಪುತ್ತೂರಿನ ಎಸಿಜೆಎ ನ್ಯಾಯಾಲಯ ಜಾಮೀನು ನೀಡಿ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಧ್ಯಂತರ ಜಾಮೀನು ಪಡೆದಿದ್ದ ಜಗದೀಶ್ ಕಾರಂತರಿಗೆ ಇದೀಗ ಪೂರ್ಣ ಪ್ರಮಾಣದ ಜಾಮೀನು ದೊರೆತಿದೆ.

ಪುತ್ತೂರಿನಲ್ಲಿ ಸೆ.15ರಂದು ನಡೆದ ಪ್ರತಿಭಟನಾ ಸಭೆಯೊಂದರಲ್ಲಿ ಪೊಲೀಸರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಬಗ್ಗೆ ಜಗದೀಶ್ ಕಾರಂತ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಜಗದೀಶ್ ಕಾರಂತ್‌ರನ್ನು ಸೆ.30ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು.

ಬಳಿಕ ಅಂದೇ ರಾತ್ರಿ ಸುಮಾರು 12:30ಕ್ಕೆ ಪುತ್ತೂರು ನಗರ ಠಾಣೆಗೆ ಕರೆತಂದು ನಗರದ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ಕಾರಂತ್‌ಗೆ ಮಧ್ಯಂತರ ಜಾಮೀನು ನೀಡಿದ್ದರು. ಬಳಿಕ ಜಾಮೀನು ಅರ್ಜಿಯ ವಿಚಾರಣೆ ಅ.3ಕ್ಕೆ ನಡೆದಿತ್ತು. ಬಳಿಕ ವಿಚಾರಣೆಯನ್ನು ಅ.4ಕ್ಕೆ ಮುಂದೂಡಲಾಗಿತ್ತು. ಅದರೆ ಅ.4ರಂದು ವಕೀಲರ ಮುಷ್ಕರದ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಅ.6ಕ್ಕೆ ಮುಂಡೂಡಲಾಗಿತ್ತು. ಶುಕ್ರವಾರ ಜಗದೀಶ್ ಕಾರಂತ ಪರ-ವಿರೋಧ ವಾದವನ್ನು ಆಲಿಸಿದ ಪುತ್ತೂರು ಎಸಿಜೆಎ ನ್ಯಾಯಾಲಯದ ನ್ಯಾಯಾಧೀಶ ಕಿಶನ್ ಬಿ. ಮಡಲಗಿಯವರು ಜಾಮೀನು ಆದೇಶವನ್ನು ಇಂದಿಗೆ ಕಾಯ್ದಿರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News