ಜಾರ್ಖಂಡ್‌ನಲ್ಲಿ ಗುಂಡಿಟ್ಟು ಬಿಜೆಪಿ ನಾಯಕನ ಹತ್ಯೆ
Update: 2017-10-07 18:05 IST
ಸಿಮಡೇಗಾ(ಜಾರ್ಖಂಡ್),ಅ.7: ಸಿಮಡೇಗಾ ಜಿಲ್ಲೆಯ ಲಚರಾಗಢ್‌ನಲ್ಲಿ ಶುಕ್ರವಾರ ರಾತ್ರಿ ಅಪರಿಚಿತ ದಾಳಿಕೋರನೋರ್ವ ಸ್ಥಳೀಯ ಬಿಜೆಪಿ ನಾಯಕ ಮನೋಜ ನಗೇಶಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ನಗೇಶಿಯಾ ತನ್ನ ನಿವಾಸದಲ್ಲಿ ಸ್ನೇಹಿತನೊಂದಿಗೆ ಊಟ ಮಾಡುತ್ತಿದ್ದಾಗ ದಾಳಿ ನಡೆಸಿದ ಹಂತಕ ಅವರ ಮೇಲೆ ಗುಂಡುಗಳನ್ನು ಹಾರಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದರು.
ಜಾರ್ಖಂಡ್ ಬಿಜೆಪಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಘಟಕದ ಖಜಾಂಚಿ ಯಾಗಿದ್ದ ನಗೇಶಿಯಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಈ ಹಿಂದೆ ಮಾವೋವಾದಿಯಾಗಿದ್ದ ಅವರು ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮುಖ್ಯವಾಹಿನಿಗೆ ಮರಳಿದ್ದರು.
ಹತ್ಯೆಯ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ರಘುವರ ದಾಸ್ ಅವರು, ಹಂತಕನ ಸೆರೆಗೆ ಕ್ರಮವನ್ನು ಕೈಗೊಳ್ಳುವಂತೆ ಪೊಲೀಸ ಮಹಾ ನಿರ್ದೇಶಕರಿಗೆ ಆದೇಶಿಸಿದ್ದಾರೆ.