ಚೀನಾ ರಸ್ತೆ ವಿಸ್ತರಿಸಿದ್ದು ಹೇಗೆಂದು ಎದೆ ತಟ್ಟಿ ಮುಗಿದ ಬಳಿಕ ಉತ್ತರಿಸುವಿರಾ?
ಹೊಸದಿಲ್ಲಿ,ಅ.7 : ಡೋಕಾ ಲಾದಲ್ಲಿ ಭಾರತೀಯ ಸೈನಿಕರು ದೊಡ್ಡ ಸಂಖ್ಯೆಯಲ್ಲಿದ್ದರೂ ಅಲ್ಲಿನ ರಸ್ತೆಯನ್ನು ಚೀನಾ ಹೇಗೆ ಅಗಲಗೊಳಿಸಿತು ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ‘‘ಮೋದೀಜಿ ಎದೆ ತಟ್ಟಿ ಜಂಭ ಕೊಚ್ಚಿಕೊಳ್ಳುವ ಕಾರ್ಯ ಮುಗಿದ ಬಳಿಕ ಈ ಪ್ರಶ್ನೆಗೆ ಉತ್ತರಿಸುವಿರಾ?’’ ಎಂದು ರಾಹುಲ್ ಟ್ವೀಟ್ ಮಾಡಿ ಪ್ರಧಾನಿಯನ್ನು ಅಣಕಿಸಿದ್ದಾರೆ. ಚೀನಾ ಡೋಕಾ ಲಾ ರಸ್ತೆಯನ್ನು ಅಗಲಗೊಳಿಸಿರುವ ಬಗೆಗಿನ ಪತ್ರಿಕಾ ವರದಿಯೊಂದನ್ನೂ ಈ ಟ್ವೀಟ್ ಜತೆ ರಾಹುಲ್ ಟ್ಯಾಗ್ ಮಾಡಿದ್ದಾರೆ.
ಡೋಕಾ ಲಾ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಇನ್ನೂ ಮುಂದುವರಿದಿರುವಾಗ ಚೀನಾ ಅಲ್ಲಿನ ರಸ್ತೆಯನ್ನು ಮತ್ತಷ್ಟು ಅಗಲಗೊಳಿಸಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಎರಡೂ ದೇಶಗಳು ಸಿಕ್ಕಿಂ-ಭೂತಾನ್-ಟಿಬೆಟ್ ಜಂಕ್ಷನ್ ಸಮೀಪ ಸನ್ನದ್ಧ ಸ್ಥಿತಿಯಲ್ಲಿರುವ ತಮ್ಮ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಿವೆ.
ಜುಲೈ ತಿಂಗಳಲ್ಲಿ ಭಾರತವು ಇಲ್ಲಿನ ರಸ್ತೆಯನ್ನು ಚೀನಾ ವಿಸ್ತರಿಸುವುದನ್ನು ತಡೆದಿದ್ದರೂ ಇದೀಗ ನಡೆದಿರುವ ರಸ್ತೆ ನಿರ್ಮಾಣದ ಬಗ್ಗೆ ಭಾರತ ಸರಕಾರ ಇನ್ನೂ ಪ್ರತಿಕ್ರಿಯಿಸಿಲ್ಲ.