ಅಕ್ಟೋಬರ್ 13: ದೇಶಾದ್ಯಂತ ಪೆಟ್ರೋಲ್ ಬಂಕ್‌ಗಳು ಬಂದ್

Update: 2017-10-07 14:50 GMT

ಮುಂಬೈ, ಅ.7: ದೀರ್ಘ ಕಾಲದಿಂದ ಬಾಕಿ ಉಳಿದಿರುವ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತದಾದ್ಯಂತದ 54 ಸಾವಿರ ಪೆಟ್ರೋಲ್ ಬಂಕ್‌ಗಳು ಅಕ್ಟೋಬರ್ 13ರಂದು ಒಂದು ದಿನ ಬಂದ್ ನಡೆಸಲಿವೆ ಎಂದು ಪೆಟ್ರೋಲ್ ಬಂಕ್ ನಿರ್ವಾಹಕರ ಸಂಘಟನೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಎಲ್ಲ ಪೆಟ್ರೋಲ್ ವಿತರಕರ ಮೂರು ರಾಷ್ಟ್ರವ್ಯಾಪಿ ಸಂಘಟನೆಗಳ ಒಕ್ಕೂಟವಾದ ಯುನೈಟೆಡ್ ಪೆಟ್ರೋಲಿಯಂ ಫ್ರಂಟ್‌ನ ಮೊದಲ ಜಂಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಫೆಡರೇಶನ್ ಆಫ್ ಮಹಾರಾಷ್ಟ್ರ ಪೆಟ್ರೋಲ್ ಡೀಲರ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಉದಯ್ ಲೋದ್ ತಿಳಿಸಿದ್ದಾರೆ.

    2016 ನವೆಂಬರ್ 4ರಂದು ತೈಲ ಮಾರುಕಟ್ಟೆ ಕಂಪೆನಿಗಳೊಂದಿಗೆ ಮಾಡಿದ ಒಪ್ಪಂದದ ಅನುಷ್ಠಾನ, ಮಾರುಕಟ್ಟೆ ಶಿಸ್ತು ಮಾರ್ಗಸೂಚಿ ಹಾಗೂ ಅನುಮೋದನೆ ಅಡಿಯಲ್ಲಿ ಹೇರಲಾದ ಪಕ್ಷಪಾತದ ದಂಡ ರದ್ದುಗೊಳಿಸುವುದು ಮೊದಲಾದವು ಬೇಡಿಕೆಗಳಲ್ಲಿ ಸೇರಿವೆ.

 ತೈಲ ಉತ್ಪನ್ನಗಳ ಬೆಲೆ ದಿನನಿತ್ಯ ಬದಲಾವಣೆಯಾಗುತ್ತಿರುವುದರಿಂದ ಗ್ರಾಹಕರು ಹಾಗೂ ವಿತರಕರು ನಷ್ಟ ಮಾಡಿಕೊಳ್ಳುವುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಯುನೈಟೆಡ್ ಪೆಟ್ರೋಲಿಯಂ ಫ್ರಂಟ್, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತರಬೇಕು ಎಂದು ಆಗ್ರಹಿಸಿದೆ..

ಪ್ರತಿಭಟನೆಯ ಮೊದಲ ಹಂತವಾಗಿ ದೇಶಾದ್ಯಂತದ 54 ಸಾವಿರ ಪೆಟ್ರೋಲ್ ಬಂಕ್‌ಗಳಲ್ಲಿ ಅಕ್ಟೋಬರ್ 13ರಂದು ಪೆಟ್ರೋಲ್ ಹಾಗೂ ಡೀಸೆಲ್ ಖರೀದಿ ಹಾಗೂ ಮಾರಾಟವನ್ನು ಸ್ಥಗಿತಗೊಳಿಸಲಾಗುವುದು ಎಂದು ಲೋಧ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News