ಸಹೋದರಿಯನ್ನು ಅಧಿಕಾರದ ಸನಿಹಕ್ಕೆ ತಂದ ಕಿಮ್ ಜಾಂಗ್ ಉನ್
ಉತ್ತರ ಕೊರಿಯ: (ದಕ್ಷಿಣ ಕೊರಿಯ), ಅ. 8: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ತನ್ನ 28 ವರ್ಷದ ಸಹೋದರಿಯನ್ನು ಆಡಳಿತಾರೂಢ ಪಕ್ಷದ ರಾಜಕೀಯ ಘಟಕಕ್ಕೆ ಕರೆತಂದಿದ್ದಾರೆ. ಈ ಮೂಲಕ ಸಹೋದರಿಯನ್ನು ಅಧಿಕಾರ ಕೇಂದ್ರಕ್ಕೆ ಪರಿಚಯಿಸಿರುವ ಅವರು, ಸರಕಾರದಲ್ಲಿ ಕುಟುಂಬದ ನಿಯಂತ್ರಣವನ್ನು ಬಲಪಡಿಸಿದ್ದಾರೆ.
ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿ ಶನಿವಾರ ನಡೆದ ವರ್ಕರ್ಸ್ ಪಾರ್ಟಿ ಸಮಾವೇಶದಲ್ಲಿ ಸಹೋದರಿ ಕಿಮ್ ಯೊ ಜಾಂಗ್‌ಗೆ ಭಡ್ತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ, ‘ಅಮೆರಿಕದ ಸಾಮ್ರಾಜ್ಯಶಾಹಿಗಳ ಪರಮಾಣು ಬ್ಲಾಕ್‌ಮೇಲ್’ ವಿರುದ್ಧ ರಕ್ಷಣೆ ಪಡೆಯಲು ಪರಮಾಣು ಅಸ್ತ್ರಗಳ ಅಭಿವೃದ್ಧಿಯನ್ನು ಮುಂದುವರಿಸುವುದಾಗಿ ಕಿಮ್ ಜಾಂಗ್ ಉನ್ ಘೋಷಿಸಿದರು ಎಂದು ಅಧಿಕೃತ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜನ್ಸಿ ವರದಿ ಮಾಡಿದೆ.
ಅವರ ಕಿರಿಯ ಸಹೋದರಿಯನ್ನು ಪಕ್ಷದ ಕೇಂದ್ರೀಯ ಸಮಿತಿಯ ರಾಜಕೀಯ ಬ್ಯೂರೋದ ಪರ್ಯಾಯ ಸದಸ್ಯೆಯಾಗಿ ನೇಮಿಸಲಾಯಿತು. ಬ್ಯೂರೋದ ನೇತೃತ್ವವನ್ನು ಸ್ವತಃ ಕಿಮ್ ಜಾಂಗ್ ಉನ್ ವಹಿಸಿದ್ದಾರೆ. ಇದು ಪಕ್ಷದ ಕೇಂದ್ರೀಯ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿ ಕೆಲಸ ಮಾಡುತ್ತದೆ.
ಈ ಮೊದಲು ಕಿಮ್ ಯೊ ಜಾಂಗ್ ಪಕ್ಷದ ಪ್ರಚಾರ ಇಲಾಖೆಯಲ್ಲಿ ಉಪ ನಿರ್ದೇಶಕಿಯಾಗಿದ್ದರು.