ಆಸ್ಪತ್ರೆಯಲ್ಲಿ ಜಯಲಲಿತಾರನ್ನು ನಾನು ನೋಡಿರಲಿಲ್ಲ: ತ.ನಾ.ಸಚಿವ

Update: 2017-10-08 17:41 GMT

ಪುದುಕೊಟ್ಟೈ,ಅ.8: ಕಳೆದ ವರ್ಷ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ದಿ.ಜಯಲಲಿತಾರನ್ನು ತಾನು ನೋಡಿರಲಿಲ್ಲ ಮತ್ತು ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಏಕಸದಸ್ಯ ವಿಚಾರಣಾ ಆಯೋಗದ ಮುಂದೆ ಈ ಬಗ್ಗೆ ಹೇಳಿಕೆ ನೀಡಲು ಸಿದ್ಧನಿದ್ದೇನೆ ಎಂದು ರಾಜ್ಯದ ಪ್ರವಾಸೋದ್ಯಮ ಸಚಿವ ವೆಳ್ಳಮಂಡಿ ನಟರಾಜನ್ ಅವರು ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಮ್ಮಾ ಅಪೋಲೊ ಆಸ್ಪತ್ರೆಯಲ್ಲಿದ್ದಾಗ ನಾನು ಅವರನ್ನು ನೋಡಿರಲಿಲ್ಲ. ಆಸ್ಪತ್ರೆಯ ಎರಡನೇ ಅಂತಸ್ತಿನವರೆಗೆ ಮಾತ್ರ ನಾವು ಹೋಗಬಹುದಿತ್ತು. ಅಲ್ಲಿಂದ ಮುಂದೆ ಅವರ ಕೋಣೆಗೆ ಯಾರನ್ನೂ ಬಿಡುತ್ತಿರಲಿಲ್ಲ ಎಂದ ಅವರು, ಆಯೋಗವು ನನ್ನನ್ನು ಕರೆಸಿ ವಿಚಾರಿಸಿದರೆ ನಾನು ಈ ಸತ್ಯವನ್ನು ತಿಳಿಸುತ್ತೇನೆ. ವಾಸ್ತವದಲ್ಲಿ ಎಲ್ಲ ಸಚಿವರೂ ಆಯೋಗದ ಎದುರು ಹೇಳಿಕೆ ನೀಡಲು ಸಿದ್ಧರಿದ್ದಾರೆ ಎಂದರು.

ರಾಜ್ಯ ಸರಕಾರವು ಸೆ.22ರಂದು ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸಲು ಮದ್ರಾಸ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ.ಆರ್ಮುಗಸಾಮಿ ಅವರ ಏಕಸದಸ್ಯ ಆಯೋಗವನ್ನು ರಚಿಸಿದೆ.

ದಿಂಡಿಗಲ್ ಶ್ರೀನಿವಾಸನ್ ಸೇರಿದಂತೆ ಹಲವು ಸಚಿವರು ತಮಗೆ ಜಯಲಲಿತಾರನ್ನು ನೋಡುವ ಅವಕಾಶವಿರಲಿಲ್ಲ ಎಂದು ಹೇಳಿದ್ದರೆ, ಇನ್ನು ಕೆಲವು ಸಚಿವರು ತಾವು ಜಯಲಲಿತಾರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾಗಿ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News