ಭಾರತಕ್ಕೆ ಕೊಲಂಬಿಯಾ ವಿರುದ್ಧ ‘ಅಗ್ನಿಪರೀಕ್ಷೆ’

Update: 2017-10-08 18:11 GMT

ಹೊಸದಿಲ್ಲಿ, ಅ.8: ಚೊಚ್ಚಲ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸೋತಿರುವ ಭಾರತದ ಕಿರಿಯರ ಫುಟ್ಬಾಲ್ ತಂಡ ಸೋಮವಾರ ಮತ್ತೊಂದು ಬಲಿಷ್ಠ ತಂಡ ಕೊಲಂಬಿಯಾ ವಿರುದ್ಧ ಕಠಿಣ ಸವಾಲು ಎದುರಿಸಲಿದೆ.

ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದಿದ್ದ ಅಮೆರಿಕ ವಿರುದ್ಧದ ತನ್ನ ಮೊದಲ ಗ್ರೂಪ್ ಪಂದ್ಯದಲ್ಲಿ ಭಾರತ 3-0 ಅಂತರದಿಂದ ಸೋತಿತ್ತು. ಭಾರತ ಶಕ್ತಿಮೀರಿ ಪ್ರಯತ್ನಿಸಿದರೂ ಅಮೆರಿಕದ ವಿರುದ್ಧ ಕೌಶಲ್ಯದ ಪ್ರದರ್ಶನದ ಕೊರತೆ ಎದುರಿಸಿತು. ಚೊಚ್ಚಲ ಪಂದ್ಯದಲ್ಲೇ ಉತ್ತರ ಕೊರಿಯಾ ವಿರುದ್ಧ ಜಯಭೇರಿ ಬಾರಿಸಿರುವ ಆಫ್ರಿಕದ ನೈಜರ್ ತಂಡ ಭಾರತಕ್ಕೆ ಸ್ಫೂರ್ತಿಯಾಗಬೇಕಾಗಿದೆ.

‘‘ಕೊಲಂಬಿಯಾ ಬಲಿಷ್ಠ ಎದುರಾಳಿ. ನಾವು ನಮ್ಮ ಮುಂದಿರುವ ಗುರಿಯತ್ತ ಗಮನ ನೀಡುವೆವು. ಕೊಲಂಬಿಯಾ ವಿರುದ್ಧ ಕಠಿಣಸವಾಲಿಗೆ ನಮ್ಮ ತಂಡ ಸಜ್ಜಾಗಿದೆ’’ಎಂದು ಭಾರತದ ಕೋಚ್ ಲೂಯಿಸ್ ನಾರ್ಟನ್ ಮಾಟೊಸ್ ಹೇಳಿದ್ದಾರೆ.

ಸಿಕ್ಕಿಂನ ಕೋಮಲ್ ಥಟಾಲ್ ಮೊದಲ ಪಂದ್ಯದಲ್ಲಿ ಗಮನ ಸೆಳೆದಿದ್ದರು. ಆದರೆ, ದ್ವಿತೀಯಾರ್ಧದಲ್ಲಿ ಗೋಲು ಬಾರಿಸುವ ಅವಕಾಶ ಕೈಚೆಲ್ಲಿದ್ದರು. ಕೋಮಲ್ ಜೊತೆಗಾರ ಅನಿಕೇತ್ ಜಾಧವ್ ಉತ್ತಮ ಪ್ರದರ್ಶನ ನೀಡಿದ್ದರು. ಡಿಫೆಂಡರ್‌ಗಳಾದ ಅನ್ವರ್ ಅಲಿ ಹಾಗೂ ಜಿತೇಂದ್ರ ಸಿಂಗ್ ಅಮೆರಿಕಕ್ಕೆ ಒತ್ತಡ ಹೇರಲು ಯತ್ನಿಸಿದ್ದರು. ಗೋಲ್‌ಕೀಪರ್ ಧೀರಜ್ ಸಿಂಗ್ ಅಮೆರಿಕಕ್ಕೆ ಕೆಲವು ಗೋಲು ನಿರಾಕರಿಸಿ ಭಾರತ ದೊಡ್ಡ ಅಂತರದಿಂದ ಸೋಲುವುದನ್ನು ತಪ್ಪಿಸಿದ್ದರು. ತನ್ನ ಮೊದಲ ಪಂದ್ಯದಲ್ಲಿ ಘಾನಾ ವಿರುದ್ಧ ಸೋತಿರುವ ಕೊಲಂಬಿಯಾ ಈ ತನಕ 5 ವಿಶ್ವಕಪ್ ಟೂರ್ನಿಯನ್ನು ಆಡಿದೆ. 2 ಬಾರಿ ಮೂರನೆ ಸ್ಥಾನ ಪಡೆದಿದೆ.

 ಪರಾಗ್ವೆಗೆ ಗೆಲುವಿನ ಓಟ ಮುಂದುವರಿಸುವ ಚಿತ್ತ: ವಿಶ್ವಕಪ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಸೋಮವಾರ ನ್ಯೂಝಿಲೆಂಡ್‌ನ್ನು ಎದುರಿಸಲಿರುವ ಪರಾಗ್ವೆ ತಂಡ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ತನ್ನ ಮೊದಲ ಪಂದ್ಯದಲ್ಲಿ ಕಳೆದ ವರ್ಷದ ವಿಶ್ವಕಪ್‌ನ ರನ್ನರ್ಸ್-ಅಪ್ ಮಾಲಿ ವಿರುದ್ಧ ಆಕ್ರಮಣಕಾರಿ ಶೈಲಿಯಲ್ಲಿ ಆಡಿದ್ದ ಪರಾಗ್ವೆ 3-2 ಅಂತರದಿಂದ ಜಯ ಸಾಧಿಸಿತ್ತು. ಪರಾಗ್ವೆಗೆ ಲಿಯೊನಾರ್ಡೊ ಸ್ಯಾಂಚೆಝ್ ಫಾರ್ಮ್ ಅತ್ಯಂತ ನಿರ್ಣಾಯಕವಾಗಿದೆ. ಮಾಲಿ ವಿರುದ್ಧ ದ್ವಿತೀಯಾರ್ಧದಲ್ಲಿ ಸತತ ಗೋಲುಗಳನ್ನು ಬಿಟ್ಟುಕೊಟ್ಟಿದ್ದ ಪರಾಗ್ವೆಯ ಡಿಫೆನ್ಸ್ ದುರ್ಬಲವಾಗಿ ಕಂಡುಬಂದಿತ್ತು. ಉತ್ತಮ ಸ್ಟೈಕರ್‌ಗಳನ್ನು ಹೊಂದಿರುವ ಕಿವೀಸ್ ವಿರುದ್ಧ ಪರಾಗ್ವೆಯ ಡಿಫೆನ್ಸ್ ವಿಭಾಗ ಬಲಿಷ್ಠವಾಗಬೇಕಾಗಿದೆ. ಪರಾಗ್ವೆ 2001 ಹಾಗೂ 2015ರ ವಿಶ್ವಕಪ್‌ನಲ್ಲಿ ಗ್ರೂಪ್ ಹಂತ ದಾಟಲು ವಿಫಲವಾಗಿದ್ದ ಪರಾಗ್ವೆ ತಂಡ ಕಿವೀಸ್‌ನ್ನು ಮಣಿಸಿ 17 ವರ್ಷಗಳ ಬಳಿಕ ನಾಕೌಟ್‌ಹಂತಕ್ಕೇರುವ ವಿಶ್ವಾಸದಲ್ಲಿದೆ.

ಟರ್ಕಿ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಮಾಲಿ: 2015ರ ವಿಶ್ವಕಪ್‌ನಲ್ಲಿ 2ನೆ ಸ್ಥಾನ ಪಡೆದಿರುವ ಮಾಲಿ ತಂಡ ಸೋಮವಾರ ನಡೆಯಲಿರುವ ಬಿ ಗುಂಪಿನ ಪಂದ್ಯದಲ್ಲಿ ಟರ್ಕಿಯನ್ನು ಎದುರಿಸಲಿದೆ. ಪರಾಗ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಸೋತಿರುವ ಮಾಲಿ ತಂಡ ಟರ್ಕಿ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ. ಪರಾಗ್ವೆ ವಿರುದ್ಧ ಆರಂಭದಲ್ಲಿ 2 ಗೋಲುಬಿಟ್ಟುಕೊಟ್ಟಿದ್ದ ಮಾಲಿ ತಂಡ ಸತತ 2 ಗೋಲು ಬಾರಿಸಿ 2-2 ರಿಂದ ಸಮಬಲ ಸಾಧಿಸಿತ್ತು. ಅಂತಿಮವಾಗಿ ಪರಾಗ್ವೆ 3-2 ಅಂತರದ ಜಯ ಸಾಧಿಸಿತ್ತು. ಟರ್ಕಿ ತಂಡ ನ್ಯೂಝಿಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ 1-1 ರಿಂದ ಡ್ರಾ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News