ಮಹಿಳಾ ಕಟ್ಟಡ ಕಾರ್ಮಿಕರಿಗೆ ಹೆರಿಗೆ ಭತ್ಯೆ ಸೌಲಭ್ಯ: ಕೃಷ್ಣಮೂರ್ತಿ

Update: 2017-10-09 14:07 GMT

ಪುತ್ತೂರು, ಅ. 9: ಮಹಿಳಾ ಕಟ್ಟಡ ಕಾರ್ಮಿಕರಿಗೆ ಹೆರಿಗೆ ಭತ್ಯೆ ನೀಡುವಲ್ಲಿ ಇದ್ದ ನಿರ್ಬಂಧ ವನ್ನು ಸಡಿಲಿಸಲಾಗಿದ್ದು ಸೂಕ್ತ ದಾಖಲೆಗಳನ್ನು ನೀಡಿದ್ದಲ್ಲಿ ಕಾರ್ಮಿಕರಿಗೆ ಸರಕಾರದಿಂದ ಹೆರಿಗೆ ಭತ್ಯೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕೃಷ್ಣಮೂರ್ತಿ ಹೇಳಿದರು.

ಅವರು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು , ನ್ಯಾಯವಾದಿಗಳ ಸಂಘ ಪುತ್ತೂರು, ಕಾರ್ಮಿಕ ಇಲಾಖೆ ಪುತ್ತೂರು ಮತ್ತು ಬಿಎಂಎಸ್ ಸಂಘಟನೆಗಳ ಸಹಭಾಗಿತ್ವದಲ್ಲಿ ಕಟ್ಟಡ ಕಾರ್ಮಿಕರಿಗೆ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಮಿಕರಿಗೆ ಮಂಡಳಿಯ ವತಿಯಿಂದ ಒಟ್ಟು 13 ವಿವಿಧ ಸೌಲಭ್ಯಗಳನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ. ನೀತಿ ನಿಯಮಗಳನುಸಾರ ಕಾರ್ಮಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತೀ ಕಾರ್ಮಿಕರು ತಾನು ಕಾರ್ಮಿಕ ಎಂಬ ದೃಢೀ ಕರಣ ಪತ್ರವನ್ನು ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಿದರೆ ಮಾತ್ರ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ದ್ರಢೀಕರಣ ಪತ್ರವನ್ನು ನೀಡದೇ ಇದ್ದಲ್ಲಿ ಯಾವುದೇ ಸೌಲಭ್ಯವನ್ನು ಪಡೆಯಲು ಸಾದ್ಯವಾಗುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮವನ್ನು ಪುತ್ತೂರು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರಾದ ಕಿಶನ್ ಬಿ ಮಡಲಗಿ ಉದ್ಘಾಟಿಸಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಮಾತನಾಡಿ ಕಾನೂನು ಎಂಬುದು ವಕೀಲರಿಗೆ, ಪೊಲೀಸರಿಗೆ ಮತ್ತು ನ್ಯಾಯಾಧೀಶರಿಗೆ ಮಾತ್ರ ಸಂಬಂಧಿಸಿದ್ದಲ್ಲ ಎಂಬುದನ್ನು ಜನ ಸಾಮಾನ್ಯರಿಗೆ ತಿಳಿಯಪಡಿಸಲು ಗ್ರಾಮಗಳಲ್ಲಿ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ದುಡಿಯುವವರು ಮತ್ತು ದುಡಿಸುವವರು ಪರಸ್ಪರ ಅನ್ಯೋನ್ಯತೆಯಿಂದ ಇದ್ದರೆ ಸಮಾನತೆ ಕಾಣಲು ಸಾಧ್ಯ, ಯಾವುದೇ ಕಾರ್ಮಿಕರಿಗೆ ವಂಚನೆ ಮಾಡದೆ ವೇತನ ನೀಡಿದರೆ ಸಂಸ್ಥೆಯು ಅಭಿವೃದ್ದಿಯಾಗುತ್ತದೆ ಎಂದು ಹೇಳಿದರು.

ಪುತ್ತೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಕರ್ನಾಟಕ ರಾಜ್ಯ ಮಜ್ದೂರು ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಪುತ್ತೂರು ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಪ್ರಸಾದ್ ರೈ, ಉಪಾಧ್ಯಕ್ಷ ಮಹಾಬಲ ಗೌಡ ಎ, ಒಳಮೊಗ್ರು ಗ್ರಾಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉಪಸ್ಥಿತರಿದ್ದರು. ಹಿರಿಯ ಕಾರ್ಮಿಕ ನಿರೀಕ್ಷಕ ರಾಮಚಂದ್ರ ಸ್ವಾಗತಿಸಿದರು. ದೇವಿಪ್ರಸಾದ್ ರೈ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News