ಜರ್ಮನಿ, ಇರಾನ್, ಬ್ರೆಝಿಲ್‌ಗೆ ನಾಕೌಟ್ ಕನಸು

Update: 2017-10-09 18:20 GMT

ಮಾರ್ಗೊವಾ, ಅ.9: ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿರುವ ಜರ್ಮನಿ, ಇರಾನ್ ಹಾಗೂ ಬ್ರೆಝಿಲ್ ತಂಡಗಳು ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ನಾಕೌಟ್ ಹಂತಕ್ಕೇರುವ ವಿಶ್ವಾಸದಲ್ಲಿವೆ.

ಜರ್ಮನಿ-ಇರಾನ್ ಮಂಗಳವಾರ ವಿಶ್ವಕಪ್‌ನ ‘ಸಿ’ ಗುಂಪಿನ ಪಂದ್ಯದಲ್ಲಿ ಸೆಣಸಾಡಲಿವೆ. ಜರ್ಮನಿ ತನ್ನ ಮೊದಲ ಪಂದ್ಯದಲ್ಲಿ ಕೋಸ್ಟರಿಕಾವನ್ನು 2-1 ರಿಂದ ಮಣಿಸಿದರೆ, ಇರಾನ್ ತಂಡ ಗಿನಿಯಾ ತಂಡವನ್ನು 3-1 ರಿಂದ ಮಣಿಸಿತ್ತು.

ಕೋಸ್ಟರಿಕಾ ವಿರುದ್ಧದ ಪಂದ್ಯದಲ್ಲಿ ಜರ್ಮನಿ ಕಳಪೆ ಆರಂಭ ಪಡೆದಿತ್ತು. ಮೊದಲಾರ್ಧದ ಕೊನೆಯಲ್ಲಿ ಸ್ಟಾರ್ ಸ್ಟ್ರೈಕರ್ ಜಾನ್ ಫಿಯೆಟ್ ಅರ್ಪ್ ಜರ್ಮನಿಗೆ ಮುನ್ನಡೆ ಒದಗಿಸಿಕೊಟ್ಟಿದ್ದರು. ಗೋಲು ಬಾರಿಸಿದ ಕೋಸ್ಟರಿಕಾದ ಆ್ಯಂಡ್ರೆಸ್ ಗೊಮೆಝ್ ತಿರುಗೇಟು ನೀಡಿದ್ದರು. ಕೊನೆಯ ಕ್ಷಣದಲ್ಲಿ ಬದಲಿ ಆಟಗಾರ ನೊಯಾ ಅವುಕು ಗೋಲು ಬಾರಿಸಿ ಜರ್ಮನಿಗೆ ಮೂರಂಕ ತಂದುಕೊಟ್ಟಿದ್ದರು.

►ಬ್ರೆಝಿಲ್‌ಗೆ ನಾಕೌಟ್ ವಿಶ್ವಾಸ: ವಿಶ್ವಕಪ್‌ನ ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ 2-1 ರಿಂದ ಜಯ ಸಾಧಿಸಿರುವ ಪ್ರಶಸ್ತಿ ಫೇವರಿಟ್ ಬ್ರೆಝಿಲ್ ತಂಡ ಮಂಗಳವಾರ ಉತ್ತರ ಕೊರಿಯಾ ತಂಡವನ್ನು ಮಣಿಸಿ ನಾಕೌಟ್ ಹಂತಕ್ಕೇರುವ ವಿಶ್ವಾಸದಲ್ಲಿದೆ. ನಾಲ್ಕನೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಬ್ರೆಝಿಲ್ ಯುರೋಪಿನ್ ಚಾಂಪಿಯನ್ ಸ್ಪೇನ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಮೊದಲ ಪಂದ್ಯ ಆರಂಭವಾಗಲು 10 ದಿನ ಇರುವಾಗಲೇ ಕೊಚ್ಚಿಗೆ ಬಂದಿಳಿದಿದ್ದ ಬ್ರೆಝಿಲ್ ತಂಡ ಕೊಚ್ಚಿ ಯ ವಾತಾವರಣಕ್ಕೆ ಸ್ಪೇನ್‌ಗಿಂತ ಚೆನ್ನಾಗಿಯೇ ಹೊಂದಿಕೊಂಡಿತ್ತು. ಕೊರಿಯಾ ತಂಡ ತನ್ನ ಮೊದಲ ಪಂದ್ಯದಲ್ಲಿ ಆಫ್ರಿಕದ ನೈಜರ್ ತಂಡದ ವಿರುದ್ದ ಸೋತು ಭಾರೀ ಹಿನ್ನಡೆ ಕಂಡಿದೆ. ಉಭಯ ತಂಡಗಳು ಅಂಡರ್-17 ವಿಶ್ವಕಪ್‌ನಲ್ಲಿ 2 ಬಾರಿ ಸೆಣಸಾಡಿವೆ. ಎರಡೂ ಬಾರಿಯೂ ಬ್ರೆಝಿಲ್ ಜಯ ಸಾಧಿಸಿತ್ತು. 2005ರ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಹೆಚ್ಚುವರಿ ಸಮಯದಲ್ಲಿ ಬ್ರೆಝಿಲ್ ತಂಡ 3-1 ರಿಂದ ಜಯ ಸಾಧಿಸಿತ್ತು. 2009ರಲ್ಲಿ ಗ್ರೂಪ್ ಹಂತದಲ್ಲಿ 6-1 ರಿಂದ ಜಯಸಾಧಿಸಿತ್ತು.

ನೈಜರ್‌ಗೆ ಸ್ಪೇನ್ ಸವಾಲು: ಯುರೋಪಿಯನ್ ಚಾಂಪಿಯನ್ ಸ್ಪೇನ್ ತಂಡ ಮೊದಲ ಪಂದ್ಯದ ಸೋಲಿನಿಂದ ಹೊರಬಂದು ಮಂಗಳವಾರ ನಡೆಯಲಿರುವ ತನ್ನ 2ನೆ ಪಂದ್ಯದಲ್ಲಿ ನೈಜರ್ ತಂಡವನ್ನು ಮಣಿಸುವ ಯೋಜನೆ ಹಾಕಿಕೊಂಡಿದೆ.

ಲಾ ಮಾಸಿಯ ಹಾಗೂ ರಿಯಲ್ ಮ್ಯಾಡ್ರಿಡ್‌ನಲ್ಲಿ ಆಡಿರುವ ಅನುಭವವಿರುವ 9 ಆಟಗಾರರನ್ನು ಹೊಂದಿರುವ ಸ್ಪೇನ್ ಡಿ ಗುಂಪಿನ ಮೊದಲ ಪಂದ್ಯದಲ್ಲಿ ಬ್ರೆಝಿಲ್‌ಗೆ 1-2 ರಿಂದ ಸೋತಿತ್ತು. ಇತ್ತೀಚೆಗೆ ಕೊನೆಗೊಂಡಿದ್ದ ಯುರೋ-ಅಂಡರ್-17 ಟೂರ್ನಿಯಲ್ಲಿ 16 ಗೋಲುಗಳನ್ನು ಬಾರಿಸಿದ್ದ ನಾಯಕ ಅಬೆಲ್ ರುಯಿಝ್ ಹಾಗೂ ಫರ್ರಾನ್ ಟೊರ್ರೆಸ್ ಸ್ಪೇನ್‌ನ ಸ್ಟಾರ್ ಆಟಗಾರರಾಗಿದ್ದಾರೆ.

ಚೊಚ್ಚಲ ವಿಶ್ವಕಪ್ ಆಡುತ್ತಿರುವ ನೈಜರ್ ತಂಡ ತನ್ನ ಮೊದಲ ಪಂದ್ಯದಲ್ಲಿ ನಾರ್ತ್ ಕೊರಿಯಾವನ್ನು ಮಣಿಸಿ ಶುಭಾರಂಭ ಮಾಡಿತ್ತು. ಆಫ್ರಿಕನ್ ಕ್ವಾಲಿಫೈಯರ್ ಪಂದ್ಯದಲ್ಲಿ 5 ಬಾರಿಯ ಅಂಡರ್-17 ವಿಶ್ವಕಪ್ ಚಾಂಪಿಯನ್ ನೈಜೀರಿಯ ತಂಡವನ್ನು ಮಣಿಸಿತ್ತು.

 ►ಕೋಸ್ಟರಿಕಾಗೆ ಗಿನಿಯಾ ಎದುರಾಳಿ: ಮಾರ್ಗೊವಾದಲ್ಲಿ ವಿಶ್ವಕಪ್‌ನ ‘ಸಿ’ ಗುಂಪಿನ ಪಂದ್ಯದಲ್ಲಿ ಮಂಗಳವಾರ ಗಿನಿಯಾ ತಂಡವನ್ನು ಎದುರಿಸಲಿರುವ ಕೋಸ್ಟರಿಕಾ ಮೊದಲ ಪಂದ್ಯದ ಸೋಲಿನಿಂದ ಹೊರಬರುವ ವಿಶ್ವಾಸದಲ್ಲಿದೆ. ಕೋಸ್ಟರಿಕಾ ತನ್ನ ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News