ಮತೀಯವಾದ ವಿರೋಧಿಸಿ ಧರ್ಮ ರಕ್ಷಾ ಯಾತ್ರೆ : ನಳಿನ್ ಕುಮಾರ್ ಕಟೀಲ್

Update: 2017-10-10 15:33 GMT

ಪುತ್ತೂರು,ಅ.10: ಪಡುಮಲೆಯ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯೆತಿ ಪುತ್ಥಳಿಗೆ ಮಾಡಲಾದ ಅವಮಾನವನ್ನು ಖಂಡಿಸಿ  ಬಿಜೆಪಿ ನಡೆಸಿದ ಧರ್ಮ ರಕ್ಷಾ ಯಾತ್ರೆಯು ಮತೀಯವಾದದ ವಿರುದ್ಧ ನಡೆಸುತ್ತಿರುವ ಯಾತ್ರೆಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಬಡಗನ್ನೂರು ಗ್ರಾಮದ ಮುಡಿಪಿನಡ್ಕದಲ್ಲಿರುವ ದೇಯಿ ಬೈದ್ಯೆತಿ ಔಷಧಿವನದಲ್ಲಿರುವ ಮಾತೆಯ ಪ್ರತಿಮೆಗೆ ಮಾಡಲಾದ ಅವಮಾನ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ನಡೆಸಿದ ಪಾದಯಾತ್ರೆಯ ಕೊನೆಯಲ್ಲಿ ಪೆರಿಗೇರಿ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ಧರ್ಮ ರಕ್ಷಾ ಯಾತ್ರೆಯು ಈ ನಾಡಿನ ಮುಸ್ಲಿಮರ ವಿರೋಧವಲ್ಲ ಎಂದ ಅವರು ಮುಸ್ಲಿಮರೂ ದೈವಗಳನ್ನು ನಂಬುತ್ತಾರೆ. ಮುಸ್ಲಿಮರೇ ದೈವತ್ವಕ್ಕೇರಿ ಆ ಶಕ್ತಿಯನ್ನು ಹಿಂದೂಗಳು ನಂಬುತ್ತಾರೆ. ಇದು ತುಳುನಾಡಿನ ಸಂಸ್ಕøತಿ. ಇಲ್ಲಿ ರಮಾನಾಥ ರೈ ಅವರು ಮಂತ್ರಿಯಾದ ಮೇಲೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮತೀಯವಾದ ಬೆಳೆಯಿತು. ಕಟೀಲು ದೇವಿಗೆ ಅವಮಾನ ಮಾಡಿದ ಮೇಲೆ ಈಗ ದೇಯಿ ಬೈದ್ಯೆತಿಗೆ ಅವಮಾನ ಮಾಡಲಾಯಿತು. ದೈವ ಕೊರಗಜ್ಜನನ್ನೂ ಕಿಡಿಗೇಡಿಗಳು ಬಿಟ್ಟಿಲ್ಲ. ಇಂಥ ಮತೀಯವಾದ ಮನಸ್ಸಿನ ವಿರುದ್ಧ ನಮ್ಮ ಹೋರಾಟವೇ ಹೊರತು ಮುಸ್ಲಿಮರ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ರಮಾನಾಥ ರೈ ಅವರು ನನ್ನನ್ನು ನಿರಂತರ ಕೋಮುವಾದಿ ಎಂದು ಜರೆಯುತ್ತಾರೆ. ನಾನು ಹಿಂದೂ ಪರ. ದೇಶದ ಪರ. ಇದಕ್ಕೆ ಕೋಮುವಾದಿ ಎನ್ನುವುದಾದರೆ ನನಗೇಗೂ ಬೇಸರವಿಲ್ಲ. ಜಿಲ್ಲೆಯಲ್ಲಿ ಸಚಿವ ರೈ ಹೇಳುವಂತೆ ಮತೀಯವಾದವೂ ಇಲ್ಲ. ಅಸ್ಪøಶ್ಯತೆಯೂ ಇಲ್ಲ, ಸಾಮಾಜಿಕ ನ್ಯಾಯದ ಸಮಸ್ಯೆಯೂ ಇಲ್ಲ. ಇಲ್ಲಿನ ದೈವಾರಾಧನಾ ಪದ್ಧತಿಯಲ್ಲಿ ಎಲ್ಲ ರೀತಿಯ ಜಾತೀವಾದ, ಅಸ್ಪøಶ್ಯತೆ ತೊಲಗಿ ಕೊಡಿಯಡಿಯ ಎದುರಲ್ಲಿ ಸಾಮಾಜಿಕ ನ್ಯಾಯ ಪ್ರಾಪ್ತಿಯಾಗುತ್ತಾ ಬಂದಿದೆ. ಇಡೀ ಜಗತ್ತಿನ ಕಲ್ಯಾಣ ಬಯಸುವ ಏಕೈಕ ಧರ್ಮ ಹಿಂದೂ ಧರ್ಮ. ಅಂಥ ಹಿಂದುತ್ವದ ಬಗ್ಗೆ ಮಾತನಾಡಿದರೆ ಅದು ಮತೀಯವಾದ ಹೇಗಾಗುತ್ತದೆ ಎಂದವರು ಪ್ರಶ್ನಿಸಿದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂಗಳ ನಂಬಿಕೆಗೆ ಪೆಟ್ಟು ನೀಡುತ್ತಿದೆ ಎಂಬುದಕ್ಕೆ ಈಗ ಜಾರಿಗೆ ಉದ್ದೇಶಿಸಿರುವ ಮೂಢನಂಬಿಕೆ ವಿರೋಧಿ ಕಾನೂನು ಸಾಕ್ಷಿಯಾಗಿದೆ ಎಂದರು. ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ ಮಾತನಾಡಿ, ಘಟನೆಯ ಎಲ್ಲ  ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಮಾಜಿ ವಿಧಾನಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ ಮಾತನಾಡಿ, ದೇಯಿ ಬೈದೇತಿಯ ಅಪಮಾನದ ಘಟನೆಯ ಆರೋಪಿಗಳ ಪರ ಉಸ್ತುವಾರಿ ಸಚಿವರು ನಿಂತಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು ಮಾತನಾಡಿ, ರಾಜ್ಯವನ್ನು ಕಾಂಗ್ರೆಸ್ ಪಕ್ಷದ ಸಿದ್ಧರಾವಣ ಆಳುತ್ತಿದ್ದಾರೆ. ಜಿಲ್ಲೆಯನ್ನು ನಾಥ ರಾವಣ ಆಳುತ್ತಿದ್ದಾರೆ. ಹಿಂದೂ ಭಾವನೆಗಳ ಮೇಲೆ ಆಕ್ರಮಣ ಮಾಡಿದವರನ್ನು ಈ ಇಬ್ಬರು ರಾವಣರು ರಕ್ಷಿಸುತ್ತಿದ್ದಾರೆ ಎಂದು ಆಪಾದಿಸಿದರು.

ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಪುತ್ತೂರು ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕ್ಯಾ.ಬ್ರಿಜೇಶ್ ಚೌಟ, ಉಮಾನಾಥ ಕೋಟ್ಯಾನ್, ಸುದರ್ಶನ್ ಮೂಡಬಿದ್ರೆ, ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರಾದ ಈಶ್ವರ ಕಟೀಲ್, ಡಿ. ವೇದವ್ಯಾಸ ಕಾಮತ್, ವೆಂಕಟ್ ವಳಲಂಬೆ, ಡಾ.ಭರತ್ ಶೆಟ್ಟಿ, ರಂಜನ್ ಗೌಡ, ದೇವದಾಸ ಶೆಟ್ಟಿ, ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಶಿವರಂಜನ್, ಸತ್ಯಜಿತ್ ಸುರತ್ಕಲ್, ಕೇಶವ ಗೌಡ ಕನ್ನಾಯ ಉಪಸ್ಥಿತರಿದ್ದರು.

ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಪುತ್ತೂರು ನಗರ ಮಂಡಲ ಅಧ್ಯಕ್ಷ ಕೆ. ಜೀವಂಧರ ಜೈನ್ ವಂದಿಸಿದರು. ಪುತ್ತೂರು ನಗರಸಭಾ ಸದಸ್ಯ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News