ಜಿಲ್ಲೆಯಲ್ಲಿ ಹೆಚ್ಚಿನ ಸರ್ಕಾರಿ ಭೂಮಿ ಅತಿಕ್ರಮಣ : ಜಿಲ್ಲಾಡಳಿತದ ವಿರುದ್ದ ಉಪಲೋಕಾಯುಕ್ತ ಅತೃಪ್ತಿ

Update: 2017-10-10 17:24 GMT

ಪುತ್ತೂರು,ಅ.10 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂದಾಯ,ಅರಣ್ಯ ಇಲಾಖೆಗೆ ಸಂಬಂಧಿಸಿದ ಹೆಚ್ಚಿನ ಸರ್ಕಾರಿ ಜಮೀನು ಅತಿಕ್ರಮಣವಾಗಿದೆ. ಈ ಜಾಗಗಳ ಬಗ್ಗೆ ಈ ಎರಡು ಇಲಾಖೆಗಳ ನಡುವೆಯೇ ಗೊಂದಲ ಇದೆ. ಜಿಲ್ಲೆಯ ಜಿಲ್ಲಾಧಿಕಾರಿ ಈ ವಿಷಯದ ಬಗ್ಗೆ ಕ್ರಿಯಾಶೀಲರಾಗಿ ಇದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಆದರೆ  ಈ ಜಾಗಗಳನ್ನು ಗುರುತಿಸುವುದೇ ಕಷ್ಟಕರವಾಗಿದೆ ಎಂದು ಉಪಲೋಕಾಯುಕ್ತ ಸುಭಾಶ್ ಬಿ. ಆಡಿ ಅವರು ಸೋಮವಾರ ಪುತ್ತೂರಿನ ನಿರೀಕ್ಷಣಾ ಮಂದಿರದಲ್ಲಿ ನಡೆದ ದೂರು ಪರಿಶೀಲನೆ ವೇಳೆ ಜಿಲ್ಲಾಡಳಿತದ ಬಗ್ಗೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದರು.

ಬೆಳ್ತಂಗಡಿ ತಾಲ್ಲೂಕಿನ ಮೊಗ್ರು ಗ್ರಾಮದ ಜಲ್ಲಿ ಕ್ರಷರ್ ಬಗ್ಗೆ ಸಲ್ಲಿಸಲಾಗಿದ್ದ ದೂರಿನ ಬಗ್ಗೆ ವಿಚಾರಣೆ ವೇಳೆ ಮಾತನಾಡಿದ ಅವರು, ಮೊಗ್ರು ಗ್ರಾಮದ ಕ್ರಷರ್‍ಗೆ ತಾನೇ ಖುದ್ದಾಗಿ ಭೇಟಿ ನೀಡಿದ್ದೇನೆ. ಅಲ್ಲಿ ಸರ್ಕಾರಿ ಭೂಮಿ ಅತಿಕ್ರಮಣವಾಗಿರುವುದನ್ನು ಸ್ವತಹಃ ನೋಡಿದ್ದೇನೆ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಜಲ್ಲಿ ಕ್ರಷರ್ ನಡೆಯುತ್ತಿದ್ದ ಜಾಗ ಪರಸ್ಪರ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಜಂಟಿ ಸರ್ವೆ ನಡೆಸಲು ಸೂಚಿಸಿದ್ದೆ. ಆದರೆ ಇದುವರೆಗೆ ಜಂಟಿ ಸರ್ವೆ ನಡೆಸಿ, ಗೊಂದಲ ಬಗೆಹರಿಸಿಕೊಂಡಿಲ್ಲ. ಇಲಾಖೆಗಳ ನಡುವೆಯೇ ಗೊಂದಲ ಏರ್ಪಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಸರ್ಕಾರಿ ಭೂಮಿ ಅತಿಕ್ರಮಣವಾಗಿದೆ. ಅರಣ್ಯ ಇಲಾಖೆಯ ಜಾಗವೂ ಒತ್ತುವರಿಯಾಗಿರುವುದು ಕಳವಳಕಾರಿ. ಹೀಗಾದರೆ ಸರ್ಕಾರಿ ಯೋಜನೆಗಳನ್ನು ಜಾರಿಗೆ ತರುವುದಾದರೂ ಹೇಗೆ, ಈ ಬಗ್ಗೆ ಜಿಲ್ಲಾಧಿಕಾರಿ ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು ಮೊಗ್ರು ಜಲ್ಲಿ ಕ್ರಷರ್ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಿದ್ದ ಗಣಿ ಇಲಾಖೆಯ ಅಧಿಕಾರಿಯಲ್ಲಿ ಜಿಲ್ಲೆಯಲ್ಲಿ ಪರವಾನಿಗೆ ನೀಡಲಾದ ಜಲ್ಲಿ ಕ್ರೆಷರ್‍ಗಳು ಎಷ್ಟಿವೆ ಎಂದು ಪ್ರಶ್ನಿಸಿ ಪಟ್ಟಿ ನೀಡುವಂತೆ ತಿಳಿಸಿದರು. 

ಜಿಲ್ಲೆಯಲ್ಲಿ ಒಟ್ಟು 84 ಜಲ್ಲಿ ಕ್ರಷರ್‍ಗಳಿಗೆ ಪರವಾನಿಗೆ ನೀಡಲಾಗಿದೆ ಎಂದು ಗಣಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ,ಪಟ್ಟಿಯನ್ನು ನಾಳೆ ನೀಡುವುದಾಗಿ ತಿಳಿಸಿದರು. ಮೊಗ್ರುವಿನಲ್ಲಿ 50ಸೆಂಟ್ಸ್‍ಗೆ ಅನುಮತಿ ಪಡೆದುಕೊಂಡು ಸುಮಾರು 8ಎಕ್ರೆಯಷ್ಟು ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಜಲ್ಲಿ ಕ್ರೆಷರ್ ನಡೆಸಲಾಗುತ್ತಿದೆ ಎಂದು ದೂರುದಾರ ಅಗರ್ತ ಕೇಶವ ಭಟ್ ಆರೋಪಿಸಿದರು. ಇಲಾಖೆಯವರು ಸರ್ವೆ ಮಾಡಲು ತಪ್ಪಿಸಿಕೊಳ್ಳುತ್ತಿದ್ದಾರೆ,ಸಹಕಾರ ನೀಡುತ್ತಿಲ್ಲ ಎಂಬ ಆರೋಪ ವ್ಯಕ್ತವಾಯಿತು. 

ಮೊಗ್ರು ಮಾತ್ರವಲ್ಲ ಜಿಲ್ಲೆಯಲ್ಲಿ ಇಂತಹ ಅದೇಷ್ಟೋ ಕ್ರಷರ್ ಇರಬಹುದು. ಸ್ವಲ್ಪ ಜಾಗ ತೋರಿಸಿ, ಹೆಚ್ಚಿನ ಜಾಗದಲ್ಲಿ ಕ್ರಷರ್ ನಡೆಸುತ್ತಿರಬಹುದು. ಇವುಗಳ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ. ಅದ್ದರಿಂದ ಜಿಲ್ಲೆಯ ಎಲ್ಲಾ ಕ್ರಷರ್‍ಗಳ ಪರವಾನಿಗೆಯನ್ನು ಮರು ಪರಿಶೀಲಿಸುವ ಅಗತ್ಯವಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ದೂರುದಾರ ಕೇಶವ ಅಗರ್ತ ಅವರಿಗೆ ತಿಳಿಸಿದ ಉಪಲೋಕಾಯುಕ್ತರು ಕ್ರಷರ್‍ಗಳ ಬಗ್ಗೆ ಬುಧವಾರ ಮಂಗಳೂರಿನಲ್ಲಿ ನಡೆಯುವ ದೂರು ಪರಿಶೀಲನಾ ಸಭೆಯಲ್ಲಿ ವಿಚಾರಣೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಜಲ್ಲಿ ಕ್ರೆಷರ್‍ಗಳ ಕುರಿತು ವರದಿ ನೀಡಬೇಕು ಎಂದು ವಿಚಾರಣೆ ವೇಳೆ ಹಾಜರಿದ್ದ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.  ಕ್ರಷರ್ ಮಾಲೀಕರು ವಿಚಾರಣೆ ಸಂದರ್ಭ ಸುಮ್ಮನೆ ಹಾಜರಾದರೆ ಸಾಲದು. ವಕೀಲರನ್ನು ಕರೆದುಕೊಂಡು ಬಂದು ವಾದ ಮಂಡಿಸಬೇಕು ಎಂದು ಅವರು ತಿಳಿಸಿದರು. 

ಪುತ್ತೂರು ತಾಲ್ಲೂಕಿನ ಚಿಕ್ಕಮುಡ್ನೂರಿನಲ್ಲಿ ಏಕನಿವೇಶನವನ್ನು ಇಬ್ಬಾಗ ಮಾಡಿ ಇಬ್ಬರಿಗೆ ಮಾರಾಟ ಮಾಡಿ ಅಲ್ಲಿ ಕಟ್ಟಡ ನಿರ್ಮಿಸಿರುವುದು, ಬೆಳ್ತಂಗಡಿಯಲ್ಲಿ 6 ಮಂದಿ ಮಕ್ಕಳಿಗೆ ಸಲ್ಲಬೇಕಾಗಿದ್ದ ಭೂಮಿಯನ್ನು ಒಬ್ಬರ ಹೆಸರಿನಲ್ಲಿ ಮಾಡಿರುವುದು, ಉಜಿರೆಯಲ್ಲಿನ ನೀರು ಶುದ್ಧೀಕರಣ ಘಟಕದ ಜಾಗ ವಿವಾದ, ಸುಳ್ಯದ ಅಲೆಕ್ಕಾಡಿಯಲ್ಲಿ ದಲಿತ ಮನೆಗೆ ರಸ್ತೆ ಮಾಡಿಕೊಡುವ ವಿಚಾರ, ಕಡಬದಲ್ಲಿ ಮುಸ್ಲಿಂ ಮಹಿಳೆಯೊಬ್ಬರ ವಶದಲ್ಲಿರುವ ಸರ್ಕಾರಿ ಜಾಗವನ್ನು ಶಾಲೆಗೆ ಮಂಜೂರು ಮಾಡಿರುವುದು ಸೇರಿದಂತೆ 22 ಪ್ರಕರಣಗಳ ವಿಚಾರಣೆ ನಡೆಸಿ, ಕ್ರಮಕೈಗೊಂಡು ವರದಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಉಪಲೋಕಾಯುಕ್ತರು ಸೂಚಿಸಿದರು.  

ವಿಚಾರಣೆ 8ರ ಅಪರ ನಿಬಂಧಕ ಮಹಮ್ಮದ್ ಅಶ್ರಫ್, ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜಗದೀಶ್, ಪೊಲೀಸ್ ನಿರೀಕ್ಷಕರಾದ ಎಸ್. ವಿಜಯ ಪ್ರಸಾದ್, ಸುಭಾಶ್‍ಚಂದ್ರ, ಸಿಬ್ಬಂದಿ ಶಶಿಧರ್, ಸುರೇಂದ್ರ, ಹರಿಶ್ಚಂದ್ರ, ಪ್ರದೀಪ್, ದೇವಯ್ಯ, ಲೊಕೇಶ್, ರಾಧೇಶ್, ಶಾರ್ಲೆಟ್, ಅಮಿತ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News