ಚೆಕ್ ಅಮಾನ್ಯ ಪ್ರಕರಣ ; ಪ್ರತ್ಯೇಕ ಎರಡು ಪ್ರಕರಣ : ಇಬ್ಬರಿಗೆ ಶಿಕ್ಷೆ

Update: 2017-10-10 17:26 GMT

ಪುತ್ತೂರು,ಅ.10 : ಪುತ್ತೂರು ತಾಲ್ಲೂಕಿನಲ್ಲಿ ನಡೆದಿದ್ದ ಪ್ರತ್ಯೇಕ ಎರಡು ಚೆಕ್ ಅಮಾನ್ಯ ಪ್ರಕರಣಗಳಿಗೆ ಸಂಬಂಧಿಸಿ ಪುತ್ತೂರು ನ್ಯಾಯಾಲಯ ಇಬ್ಬರು ಆರೋಪಿಗಳನ್ನು ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ. 

ಪುತ್ತೂರಿನ ಎಪಿಎಂಸಿ ಪ್ರಾಂಗಣದಲ್ಲಿ ಈ ಹಿಂದೆ ಅಡಿಕೆ ವ್ಯಾಪಾರ ನಡೆಸುತ್ತಿದ್ದ  ಕೆ.ಎಂ.ಇಲ್ಯಾಸ್ ಮತ್ತು ಮಾಡ್ನೂರಿನ ಅರುಣ್‍ಕುಮಾರ್ ಶಿಕ್ಷೆಗೊಳಗಾದ ಅಪರಾಧಿಗಳು.  

ಸಂಪ್ಯದಮೂಲೆ ನಿವಾಸಿ ಸಂತೋಷ್‍ಕುಮಾರ್ ರೈ ಎಂಬವರಿಗೆ ಅರುಣ್‍ಕುಮಾರ್ ಎಂಬವರು ನೀಡಿದ್ದ ರೂ.4ಲಕ್ಷ ಮೊತ್ತದ ಚೆಕ್ ಅಮಾನ್ಯಗೊಂಡಿತ್ತು. ಸಂತೋಷ್‍ಕುಮಾರ್ ರೈ ಅವರು ಈ ಬಗ್ಗೆ ಪುತ್ತೂರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಕೆ.ಬಸವರಾಜ್ ಅವರು ಆರುಣ್‍ಕುಮಾರ್ ಅವರನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಅವರಿಗೆ 1ವರ್ಷ ಜೈಲು ಶಿಕ್ಷೆ ಹಾಗೂ ರೂ.8 ಲಕ್ಷ ದಂಡ ತೆರಳು ಆದೇಶಿಸಿದ್ದಾರೆ. 
ಇನ್ನೊಂದು ಪ್ರಕರಣದಲ್ಲಿ ಚೆಲ್ಯರಮೂಲೆ ಹರಿಪ್ರಸಾದ್ ಸಿ.ಎಚ್.ಎಂಬವರಿಗೆ ಅಡಿಕೆ ಮಾರಾಟ ಮಾಡಿದ ಬಾಬ್ತು ಪುತ್ತೂರಿನ ಎಪಿಎಂಸಿ ಪ್ರಾಂಗಣದಲ್ಲಿ ಈ ಹಿಂದೆ ಅಡಿಕೆ ವ್ಯಾಪಾರ ಮಾಡುತ್ತಿದ್ದ  ಕೆ.ಎಂ. ಇಲ್ಯಾಸ್ ಎಂಬವರು ನೀಡಿದ್ದ ರೂ.3.50 ಲಕ್ಷ ಮೌಲ್ಯದ ಚೆಕ್ ಅಮಾನ್ಯಗೊಂಡಿತ್ತು. ಈ ಕುರಿತು ಹರಿಪ್ರಸಾದ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಪಿ.ಎಂ.ಅವರು ಆರೋಪಿ ಇಲ್ಯಾಸ್ ಅವರನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿ, ಈ ಅಪರಾಧಕ್ಕಾಗಿ 6 ತಿಂಗಳ ಜೈಲು ಶಿಕ್ಷೆ ಹಾಗೂ ರೂ.3.60 ಲಕ್ಷ ದಂಡ ತೆರವುವಂತೆ ಆದೇಶ ನೀಡಿದ್ದಾರೆ. ಈ ಎರಡೂ ಪ್ರಕರಣದಲ್ಲಿ ಪಿರ್ಯಾದಿದಾರರ ಪರವಾಗಿ ವಕೀಲರಾದ ಮನೋಹರ್ ಕೆವಿ,ಆರೋನ್ ಡಿ.ಸೋಜಾ ಮತ್ತು ಅನೀಶ್‍ಕುಮಾರ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News