ಪರ್ಲಡ್ಕದಲ್ಲಿ ಹಬ್ಬದಂದು ನಡೆದ ಕಳವು ಪ್ರಕರಣ ಬಯಲು: ಲಕ್ಷಾಂತರ ಮೌಲ್ಯದ ಸೊತ್ತು ವಶ

Update: 2017-10-11 08:33 GMT

ಪುತ್ತೂರು, ಅ.11: ಪರ್ಲಡ್ಕದ ಬೈಪಾಸ್ ಬಳಿ ಮೂರು ತಿಂಗಳ ಹಿಂದೆ ಈದುಲ್ ಫಿತ್ರ್ ದಿನ ಮನೆಯಿಂದ ಹಾಡುಹಗಲೆ ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣ ದೋಚಿದ ಪ್ರಕರಣವನ್ನು ಪುತ್ತೂರು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೇರಳ- ಕಣ್ಣೂರು ಜೈಲಿನಲ್ಲಿರುವ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಕಸ್ಟಡಿಗೆ ಪಡೆದಿದ್ದು, ಅವರಿಂದ ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪರ್ಲಡ್ಕದ ಬೈಪಾಸ್‌ನ ಉಮರ್ ಫಾರೂಕ್ ಎಂಬವರ ಮನೆಯಿಂದ ಈದುಲ್ ಫಿತ್ರ್ ದಿನಂದು ಸುಮಾರು 8 ಲಕ್ಷ ರೂ. ವೌಲ್ಯದ 245 ಗ್ರಾಂ ಚಿನ್ನಾಭರಣವನ್ನು ಕಳವುಗೈಯಲಾಗಿತ್ತು. ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಸೆ.24ರಂದು ಓರ್ವ ಆರೋಪಿಯನ್ನು ಬಂಧಿಸಿತ್ತು. ವಿಚಾರಣೆಯ ವೇಳೆ ಆತ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯ ಇನ್ನಿಬ್ಬರ ಕೈವಾಡವಿರುವುದನ್ನು ಬಾಯಿಬಿಟ್ಟಿದ್ದನೆನ್ನಲಾಗಿದೆ.

ಅದರಂತೆ ವಿಚಾರಣೆ ನಡೆಸಿದಾಗ ಕೇರಳದಲ್ಲಿ ನಡೆದ ಕಳವು ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿ ಕಣ್ಣೂರು ಜೈಲಿನಲ್ಲಿರುವ ಮಂಜೇಶ್ವರದ ಹೀರೋಗಲ್ಲಿ ನಿವಾಸಿ ಸೈಯದ್ ಜಂಶೀರ್(22) ಹಾಗೂ ಬಾಯಾರುಪದವು ನಿವಾಸಿ ಇಬ್ರಾಹೀಂ ಮುಝಮ್ಮಿಲ್(21) ಎಂಬವರು ಭಾಗಿಯಾಗಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೇರಳ ಕಣ್ಣೂರು ಜೈಲಿನಿಂದ ಪುತ್ತೂರು ಪೊಲೀಸರು ಬಾಡಿ ವಾರಂಟ್ ಮೂಲಕ ಮೂರು ದಿನ ಕಸ್ಟಡಿಗೆ ಪಡೆದಿದ್ದರು. ಈ ವೇಳೆ ಬಂಧಿತರಿಂದ 245 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇದರ ಮೊತ್ತ ಸುಮಾರು 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ದ.ಕ. ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಡಿವೈಎಸ್ಪಿ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಕ್ರೈಂ ಎಸ್ಸೈ ವೆಂಕಟೇಶ್ ಭಟ್, ಎಸ್ಸೈ ಓಮನ, ಪ್ರೊಬೆಷನರಿ ಎಸ್ಸೈ ಮಂಜುನಾಥ , ರವಿ ಜಿ.ಎ., ಅಬ್ರಾರ್ ಪಾಷಾ, ಎಎಸ್ಸೈ ಚಿದಾನಂದ ಹೆಡ್ ಕಾನ್ ಸ್ಟೇಬಲ್ ಸ್ಕರಿಯ, ಮಂಜುನಾಥ, ಕೃಷ್ಣಪ್ಪ, ಪಿ.ಸಿ.ಪ್ರಸನ್ನ, ಪ್ರಶಾಂತ್ ರೈಯವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News