ಝುಬೈರ್ ಕೊಲೆ ಪ್ರಕರಣ: ಐವರ ಬಂಧನ

Update: 2017-10-11 16:09 GMT

ಮಂಗಳೂರು, ಅ.11: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಮಸೀದಿ ಬಳಿ ಅ.4ರಂದು ರಾತ್ರಿ ನಡೆದ ಝುಬೈರ್ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.

ಕಮಿಷನರ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕ್ಕಚ್ಚೇರಿ ಜಮಾಲಿಯಾ ರಸ್ತೆಯ ಸುಹೈಲ್ ಯಾನೆ ಅಬ್ದುಲ್ ರಹಿಮಾನ್ ಸುಹೈಲ್ (23), ಚೆನ್ನಯೆರೆಗುಡ್ಡೆ ಐಟಿಐ ರಸ್ತೆ ಅನಿಲ್ ಕಾಂಪೌಂಡ್ ನಿವಾಸಿ ನಿಝಾಮುದ್ದೀನ್ (23), ಸೋಮೇಶ್ವರ ಗ್ರಾಮ ಉಚ್ಚಿಲ ಸಂಕೋಲಿಗೆಯ ಮುಹಮ್ಮದ್ ಮುಸ್ತಫಾ (21), ಉಳ್ಳಾಲ ಧರ್ಮನಗರದ ತಾಜುದ್ದೀನ್ ಅಲಿಯಾಸ್ ಹಸನ್ ತಾಜುದ್ದೀನ್ (24), ಮುಕ್ಕಚ್ಚೇರಿ ಹೈದರಾಲಿ ರಸ್ತೆಯ ಆಸಿಫ್ ಅಲಿಯಾಸ್ ಮಂದ ಆಸಿಫ್ (40) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಆರೋಪಿಗಳ ಪೈಕಿ ಮಂದ ಆಸಿಫ್ ಕೊಲೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತನಾಗಿದ್ದರೆ, ಉಳಿದ ನಾಲ್ವರು ಆರೋಪಿಗಳು ಝುಬೈರ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗುವುದು ಎಂದವರು ವಿವರಿಸಿದರು.

ಆರೋಪಿ ಸುಹೈಲ್ ಎಂಬಾತನ ವಿರುದ್ಧ ಈ ಹಿಂದೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದರೆ, ತಾಜುದ್ದೀನ್ ವಿರುದ್ಧ ಮನೆಗೆ ಕಲ್ಲು ಬಿಸಾಡಿ ಹಾನಿ ಗೊಳಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಮುಹಮ್ಮದ್ ಮುಸ್ತಫಾ ಎಂಬಾತನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ನಿಝಾಮುದ್ದೀನ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ಹಾಗೂ ಮಂದ ಆಸಿಫ್ ವಿರುದ್ಧ ಈಗಾಗಲೇ ಒಟ್ಟು 10 ಪ್ರಕರಣಗಳು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಝುಬೈರ್ ಹತ್ಯೆಗೆ ಪ್ರಚೋದನೆ ನೀಡಿದವರಲ್ಲಿ ಇನ್ನೂ ಕೆಲವರಿದ್ದು, ಅವರನ್ನು ಸೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.

ಹಳೆ ದ್ವೇಷದಿಂದ ಹತ್ಯೆ: ಹಳೆಯ ದ್ವೇಷವೇ ಝುಬೈರ್ ಹತ್ಯೆಗೆ ಕಾರಣವಾಗಿದೆ. 2016ರಲ್ಲಿ ಝುಬೈರ್ ಹಾಗೂ ಇತರರ ನಡುವೆ ಗಲಾಟೆವೊಂದು ನಡೆದಿತ್ತು. ಈ ಗಲಾಟೆಯಲ್ಲಿ ಕೆಲವರು ಬಂಧಿತರಾಗಿದ್ದರು. ಈ ಸಿಟ್ಟಿನಿಂದ ಆರೋಪಿಗಳು ಸೇಡು ತೀರಿಸಿಕೊಳ್ಳಲು ಝುಬೈರ್ ರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿದೆ ಎಂದರು.

ಝುಬೈರ್ ವರ್ಷದ ಹಿಂದೆ ಮುಕ್ಕಚ್ಚೇರಿಗೆ ಬಂದು ಮಸೀದಿ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಈ ಸಂದರ್ಭದಲ್ಲಿ ಮುಕ್ಕಚ್ಚೇರಿ ಮಸೀದಿಯ ಆಡಳಿತದಲ್ಲಿ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಮಂದ ಆಸಿಫ್ ಮತ್ತು ಝುಬೈರ್ ನಡುವೆ ಮನಸ್ತಾಪ ಇತ್ತೆಂಬ ಆರೋಪವೂ ಇದ್ದು, ಈ ಎಲ್ಲಾ ವಿಷಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಮಿಷನರ್ ಹೇಳಿದರು.

ಗಾಂಜಾ ವ್ಯವಹಾರ ಸಂಬಂಧ ಇಲ್ಲ: ಝುಬೈರ್ ಹತ್ಯೆಗೂ ಗಾಂಜಾ ವ್ಯವಹಾರಕ್ಕೂ ಯಾವುದೇ ಸಂಬಂಧ ಇಲ್ಲ. ಈವರೆಗೆ ನಡೆಸಲಾಗಿರುವ ತನಿಖೆಯಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹತ್ಯೆಗೀಡಾದ ಝುಬೈರ್ ಹಾಗೂ ಹಲ್ಲೆಗೊಳಗಾದ ಇಲ್ಯಾಸ್ ಎಂಬವರ ಮೇಲೆ ಯಾವುದೇ ಕೇಸ್ ಇಲ್ಲ. ಝುಬೈರ್ ಹತ್ಯೆಗೆ ಪ್ರಚೋದನೆ ನೀಡಿದವರಲ್ಲಿ ಇನ್ನೂ ಕೆಲವರು ಇದ್ದು, ಅವರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಾಲ್ಕು ತಂಡ ರಚನೆ: ಝುಬೈರ್ ಕೊಲೆ ನಡೆದ ಬಳಿಕ ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಉಳ್ಳಾಲ ಪಿಐ ಗೋಪಿಕೃಷ್ಣ ಹಾಗೂ ಪಿಎಸ್‌ಐ ರಾಜೇಂದ್ರ ಮತ್ತು ತಂಡ, ಮಂಗಳೂರು ಗ್ರಾಮಾಂತರ ಠಾಣಾ ಪಿಎಸ್‌ಐ ಸುಧಾಕರ ಮತ್ತು ತಂಡ, ಕೊಣಾಜೆ ಠಾಣಾ ಪಿಐ ಅಶೋಕ್ ಮತ್ತು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ತಂಡ ಹಾಗೂ ಎಸಿಪಿ ವೆಲೆಂಟೈನ್ ಡಿಸೋಜ, ಸಿಸಿಬಿಯ ಪಿಐ ಸುನೀಲ್ ನಾಯ್ಕಿ ಮತ್ತು ಸಿಬ್ಬಂದಿಗಳ ತಂಡಗಳನ್ನು ರಚಿಸಲಾಗಿತ್ತು.

ಆರೋಪಿ ನಿಝಾಮುದ್ದೀನ್ ಎಂಬಾತನ ಕೆಎ 19 ಎಸಿ 0304 ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬೆಂಗಳೂರಿಗೆ ಪರಾರಿಯಾದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಆರೋಪಿಗಳನ್ನು ತಂಡ ಬಂಧಿಸಿದೆ ಎಂದು ಕಮಿಷನರ್ ಟಿ.ಆರ್.ಸುರೇಶ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿ ವೆಲೆಂಟೈನ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News