×
Ad

ಶಾ ಪುತ್ರ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದೂಡಿಕೆ

Update: 2017-10-11 19:34 IST

ಅಹ್ಮದಾಬಾದ್, ಅ.11: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್‌ಶಾ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಮೆಟ್ರೊಪಾಲಿಟನ್ ನ್ಯಾಯಾಲಯ ಅಕ್ಟೋಬರ್ 16ಕ್ಕೆ ಮುಂದೂಡಿದೆ.

 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜಯ್ ಶಾ ಸಂಸ್ಥೆಯ ವ್ಯವಹಾರ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ ಎಂದು ‘ದಿ ವೈರ್’ ವೆಬ್‌ಸೈಟ್‌ನಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ, ವೆಬ್‌ಸೈಟ್ ವಿರುದ್ಧ ಶಾ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ ಅ.11ರಂದು ವಿಚಾರಣೆ ಆರಂಭಿಸಿದಾಗ ಶಾ ಪರ ವಕೀಲರಾದ ಎಸ್.ವಿ.ರಾಜು ಹೈಕೋರ್ಟ್‌ನಲ್ಲಿ ವಾದಮಂಡಿಸಬೇಕಿರುವ ಕಾರಣ ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು.

ಲೇಖನ ಬರೆದಿರುವ ರೋಹಿಣಿ ಸಿಂಗ್, ವೆಬ್‌ಸೈಟ್ ಸುದ್ದಿ ಪೋರ್ಟಲ್‌ನ ಸ್ಥಾಪಕ ಸಂಪಾದಕರಾದ ಸಿದ್ದಾರ್ಥ್ ವರದರಾಜನ್, ಸಿದ್ದಾರ್ಥ್ ಭಾಟಿಯ ಮತ್ತು ಎಂ.ಕೆ.ವೇಣು, ಆಡಳಿತ ಸಂಪಾದಕ ಮೊನೊಬಿನ ಗುಪ್ತ, ‘ಪಬ್ಲಿಕ್ ಎಡಿಟರ್’ ಪಮೇಲಾ ಫಿಲಿಪೋಸ್ ಹಾಗೂ ‘ದಿ ವೈರ್’ನ ಪ್ರಕಾಶಕರಾದ ‘ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ’ - ಇವರನ್ನು ಪ್ರತಿವಾದಿಗಳು ಎಂದು ಹೆಸರಿಸಲಾಗಿದೆ.

 ಆರೋಪಿಗಳು ಮೂಲಲೇಖನವನ್ನು ತಿರುಚಿ, ಮಾನಹಾನಿಯಾಗುವ ರೀತಿಯಲ್ಲಿ ಬರೆಯುವ ಮೂಲಕ ತನ್ನ ಪ್ರತಿಷ್ಠೆಗೆ ಹಾನಿ ಎಸಗಲು ಸಂಚು ಹೂಡಿದ್ದಾರೆ . 2015-16ರ ಆರ್ಥಿಕ ವರ್ಷದಲ್ಲಿ ತನ್ನ ಸಂಸ್ಥೆ ಭಾರೀ ನಷ್ಟ ಅನುಭವಿಸಿದೆ. ಈ ವರ್ಷದ ನಿವ್ವಳ ಲಾಭ ಹಾಗೂ ಒಟ್ಟಾರೆ ವ್ಯವಹಾರದ ಅಂಕಿಅಂಶವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

   ಈ ಪ್ರಕರಣದ ವಿಚಾರಣೆ ನಡೆಸಬಹುದೇ ಎಂಬುದರ ಬಗ್ಗೆ ನ್ಯಾಯಾಲಯ ತನಿಖೆ ನಡೆಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ವಿಚಾರಣೆ ನಡೆಸಬಹುದೆಂದು ಈ ತನಿಖೆಯಲ್ಲಿ ಕಂಡುಬಂದರೆ ಮಾತ್ರ ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಲಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

 ಪ್ರಕರಣಕ್ಕೆ ಸಂಬಂಧಿಸಿ 100 ಕೋಟಿ ರೂ. ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿರುವ ಶಾ, ಇನ್ನೂ ಈ ಕ್ರಮಕ್ಕೆ ಮುಂದಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News