ಪೆಟ್ರೋಲ್ ಪಂಪ್ ಡೀಲರ್ ಗಳ ಮುಷ್ಕರ ಹಿಂತೆಗೆತ

Update: 2017-10-11 14:11 GMT

ಹೊಸದಿಲ್ಲಿ, ಅ.11: ಪೆಟ್ರೋಲ್ ಪಂಪ್ ಡೀಲರ್ ಗಳು ಶುಕ್ರವಾರ ನಡೆಸುವುದಾಗಿ ಘೋಷಿಸಿದ್ದ ಮುಷ್ಕರವನ್ನು ಹಿಂತೆಗೆದುಕೊಂಡಿದ್ದಾರೆ. ಕಾಂಟ್ರಾಕ್ಟ್ ಗಳ ರದ್ದತಿ ಸೇರಿದಂತೆ ಕಠಿಣ ಕ್ರಮಕೈಗೊಳ್ಳುವುದಾಗಿ ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ನೀಡಿದ್ದ ಎಚ್ಚರಿಕೆಯ ನಂತರ ಮುಷ್ಕರವನ್ನು ಹಿಂದೆಗೆದುಕೊಳ್ಳಲಾಗಿದೆ.

ದೀರ್ಘ ಕಾಲದಿಂದ ಬಾಕಿ ಉಳಿದಿರುವ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತದಾದ್ಯಂತದ 54 ಸಾವಿರ ಪೆಟ್ರೋಲ್ ಬಂಕ್‌ಗಳು ಅಕ್ಟೋಬರ್ 13ರಂದು ಒಂದು ದಿನ ಬಂದ್ ನಡೆಸಲಿವೆ ಎನ್ನಲಾಗಿತ್ತು.

ಎಲ್ಲ ಪೆಟ್ರೋಲ್ ವಿತರಕರ ಮೂರು ರಾಷ್ಟ್ರವ್ಯಾಪಿ ಸಂಘಟನೆಗಳ ಒಕ್ಕೂಟವಾದ ಯುನೈಟೆಡ್ ಪೆಟ್ರೋಲಿಯಂ ಫ್ರಂಟ್‌ನ ಮೊದಲ ಜಂಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಫೆಡರೇಶನ್ ಆಫ್ ಮಹಾರಾಷ್ಟ್ರ ಪೆಟ್ರೋಲ್ ಡೀಲರ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಉದಯ್ ಲೋದ್ ತಿಳಿಸಿದ್ದರು. ಆದರೆ ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳ ಎಚ್ಚರಿಕೆಯ ನಂತರ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ.

“ಮೂರು ತೈಲ ಕಂಪೆನಿಗಳು ಮುಷ್ಕರ ನಡೆಸದಂತೆ ಮನವಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದೆಗೆದುಕೊಳ್ಳುತ್ತಿದ್ದೇವೆ” ಎಂದು ಆಲ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಅಜಯ್ ಬನ್ಸಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News