ಮ್ಯಾನ್ಮಾರ್ ಸೇನಾಧಿಕಾರಿಗಳೊಂದಿಗೆ ಸಂಬಂಧ ಕಡಿದುಕೊಂಡ ಐರೋಪ್ಯ ಒಕ್ಕೂಟ

Update: 2017-10-11 16:08 GMT

ಬ್ರಸೆಲ್ಸ್ (ಬೆಲ್ಜಿಯಂ), ಅ. 11: ರೊಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧ ‘ಅಳತೆ ಮೀರಿದ ಬಲ ಪ್ರಯೋಗ’ ಮಾಡಿರುವುದನ್ನು ಪ್ರತಿಭಟಿಸಿ ಮ್ಯಾನ್ಮಾರ್ ಸೇನೆಯ ಹಿರಿಯ ಮುಖ್ಯಸ್ಥರೊಂದಿಗಿನ ಸಂಪರ್ಕವನ್ನು ಕೊನೆಗೊಳಿಸಲು ಐರೋಪ್ಯ ಒಕ್ಕೂಟ ನಿರ್ಧರಿಸಿದೆ.

ಪರಿಸ್ಥಿತಿಯಲ್ಲಿ ಸುಧಾರಣೆಯಾಗದಿದ್ದರೆ ಆ ದೇಶದ ವಿರುದ್ಧ ದಿಗ್ಬಂಧನ ವಿಧಿಸುವ ಬಗ್ಗೆ ಪರಿಶೀಲಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಒಕ್ಕೂಟ ನೀಡಿದೆ.

ಆಗಸ್ಟ್ 25ರಂದು ರಖೈನ್ ರಾಜ್ಯದಲ್ಲಿ ಸೇನಾ ಮತ್ತು ಪೊಲೀಸ್ ಠಾಣೆಗಳ ಮೇಲೆ ನಡೆದ ದಾಳಿಯ ಬಳಿಕ, ಸೇನೆ ರೊಹಿಂಗ್ಯನ್ನರ ವಿರುದ್ಧ ದೌರ್ಜನ್ನಗಳನ್ನು ಆರಂಭಿಸಿತ್ತು.

ಸೇನೆಯ ಹಿಂಸೆಗೆ ಬೆದರಿ ರಖೈನ್ ರಾಜ್ಯದಿಂದ ಈಗಾಗಲೇ ಐದು ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಮ್ಯಾನ್ಮಾರ್‌ನಲ್ಲಿನ ಸೇನಾ ಕಾರ್ಯಾಚರಣೆಯು ಜನಾಂಗೀಯ ನಿರ್ಮೂಲನೆಯಾಗಿದೆ ಎಂಬುದಾಗಿ ವಿಶ್ವಸಂಸ್ಥೆ ಬಣ್ಣಿಸಿದೆ.

ಮ್ಯಾನ್ಮಾರ್‌ನಿಂದ ಜನರು ಭಾರೀ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವುದು, ಅಲ್ಪಸಂಖ್ಯಾತರನ್ನು ಹೊರದಬ್ಬಲು ಉದ್ದೇಶಪೂರ್ವಕ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂಬ ಬಲವಾದ ಸಂಶಯವನ್ನು ಹುಟ್ಟುಹಾಕುತ್ತದೆ ಎಂದು ಐರೋಪ್ಯ ಒಕ್ಕೂಟ ರಾಯಭಾರಿಗಳ ಅಂಗೀಕರಿಸಿದ ಒಪ್ಪಂದ ಹೇಳುತ್ತದೆ.

ಸೋಮವಾರ ನಡೆಯಲಿರುವ ಐರೋಪ್ಯ ಒಕ್ಕೂಟದ ವಿದೇಶ ಸಚಿವರ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು.

ರಕ್ಷಣಾ ಸಹಕಾರಗಳ ಮರುಪರಿಶೀಲನೆ

‘‘ರೊಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧ ಸೇನೆಯು ಅಳತೆ ಮೀರಿದ ಬಲವನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ, ಮ್ಯಾನ್ಮಾರ್/ಬರ್ಮಾದ ಸಶಸ್ತ್ರ ಪಡೆಗಳ ಪ್ರಧಾನ ದಂಡನಾಯಕ ಮತ್ತು ಹಿರಿಯ ಸೇನಾಧಿಕಾರಿಗಳಿಗೆ ಐರೋಪ್ಯ ಒಕ್ಕೂಟ ಮತ್ತು ಅದರ ಸದಸ್ಯ ದೇಶಗಳು ನೀಡುವ ಆಮಂತ್ರಣಗಳನ್ನು ನಿಲ್ಲಿಸಲಾಗುವುದು ಹಾಗೂ ಎಲ್ಲ ಸಾಂದರ್ಭಿಕ ರಕ್ಷಣಾ ಸಹಕಾರಗಳನ್ನು ಪುನರ್‌ಪರಿಶೀಲಿಸಲಾಗುವುದು’’ ಎಂದು ಒಪ್ಪಂದ ಹೇಳುತ್ತದೆ. ಅದೇ ವೇಳೆ, ಹಿಂಸೆಯನ್ನು ತಕ್ಷಣ ನಿಲ್ಲಿಸುವಂತೆ ಸಂಬಂಧಪಟ್ಟ ಎಲ್ಲ ಪಕ್ಷಗಳಿಗೆ ಕರೆ ನೀಡುತ್ತದೆ.

‘ಆಂತರಿಕ ದೌರ್ಜನ್ಯ’ಕ್ಕಾಗಿ ಬಳಸಬಹುದಾದ ಶಸ್ತ್ರಗಳು ಮತ್ತು ಸಲಕರಣೆಗಳ ರಫ್ತನ್ನು ಐರೋಪ್ಯ ಒಕ್ಕೂಟ ಈಗಾಗಲೇ ನಿಷೇಧಿಸಿದೆ. ಬಿಕ್ಕಟ್ಟಿನಲ್ಲಿ ಸುಧಾರಣೆಯಾಗದಿದ್ದರೆ, ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News